2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈನಲ್ಲಿ ಶನಿವಾರ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಹಾಗೂ ಸೂರ್ಯಕುಮಾರ್ ಯಾದವ್ ಸಭೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಜಿತೇಶ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಶಾನ್ ಕಿಶನ್ ಅವರಿಗೆ ಮಣೆ ಹಾಕಲಾಗಿದೆ.
ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಇನ್ನು ಈ ವಿಶ್ವಕಪ್‌ಗೆ 49 ದಿನ ಬಾಕಿ ಇದ್ದಾಗಲೇ ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಭರವಸೆ ಮೂಡಿಸಿದ ಆಟಗಾರರು ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಹಲವು ಯುವ ಆಟಗಾರರು ಟಿ20 ವಿಶ್ವಕಪ್ ಆಡುವ ಅನುಭವ ಪಡೆಯಲಿದ್ದಾರೆ.

ನಿರೀಕ್ಷೆಯಂತೆ ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ ಮೈಚಳಿ ಬ್ಯಾಟ್ ಮಾಡಲು ಹೆಸರುವಾಸಿ. ಇವರು ಪವರ್‌ಪ್ಲೇನಲ್ಲಿ ಎದುರಾಳಿ ಬೌಲರ್‌ಗಳ ಸದ್ದಡಗಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಇವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುತ್ತಿರುವ ತಿಲಕ್ ವರ್ಮಾ ಸಹ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇವರು ಕಳೆದ 1 ವರ್ಷದಲ್ಲಿ ಮಧ್ಯಮ ಕ್ರಮಾಂಕದ ಆಧಾರ ಸ್ಥಂಬದಂತೆ ಕಂಡು ಬಂದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿರುವ ಶುಭಮನ್ ಗಿಲ್ ತಂಡದಿಂದ ಹೊರ ನಡೆದಿದ್ದಾರೆ. ಇವರು ಸದ್ಯ ಭಾರತ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರಿಂದ ಇವರನ್ನು ಕೈ ಬಿಡಲಾಗಿದೆ. ಇವರ ಬದಲಿಗೆ ಆರಂಭಿಕರಾಗಿ ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಮೇಲೆ ಆಯ್ಕೆ ಸಮಿತಿ ಒಲವು ತೋರಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಸ್ಟಾರ್ ಫಿನಿಷರ್ ರಿಂಕು ಸಿಂಗ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಉಳಿದಂತೆ ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ.
ಪ್ರಕಟಿತ ಟಿ20 ವಿಶ್ವಕಪ್ ತಂಡದಲ್ಲಿ ಮೂವರು ವೇಗದ ಬೌಲರ್‌ಗಳಿಗೆ ಮಣೆ ಹಾಕಲಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಅರ್ಷದೀಪ್ ಸಿಂಗ್, ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಭರವಸೆಯ ವೇಗಿ ಹರ್ಷಿತ್ ರಾಣಾ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸ್ಪಿನ್ ಬೌಲರ್‌ಗಳಾಗಿ ಚೈನಾ ಮನ್ ಬೌಲರ್ ಕುಲದೀಪ್ ಯಾದವ್, ವಿಶ್ವದ ನಂಬರ್ 1 ಟಿ20 ಬೌಲರ್ ವರುಣ್ ಚಕ್ರವರ್ತಿ ತಂಡದ ಭಾಗವಾಗಿದ್ದಾರೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಜಸ್ಪ್ರೀತ್ ಬುಮ್ರಾ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್ (ವಿಕೆಟ್ ಕೀಪರ್),