ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 5ರಂದು ಭಾರತದಲ್ಲಿ ಐಸಿಸಿ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದ್ದು, ಭಾರತ ತಂಡವು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಆಡಿಸಬಹುದಾದ ಭಾರತದ ಸಂಭವನೀಯ ತಂಡದ ಸಂಯೋಜನೆಯ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದೆ.
ವಿಶ್ವಕಪ್‌ಗಾಗಿ ಸಂಭಾವ್ಯ ತಂಡದ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಆಯ್ಕೆ ಸಮಿತಿ ನೂತನ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ವೆಸ್ಟ್ ಇಂಡೀಸ್‌ಗೆ ತೆರಳಲಿದ್ದಾರೆ. ಸದ್ಯ ಭಾರತ ತಂಡ ಕೆರಿಬಿಯನ್ ನಾಡಿನಲ್ಲಿ ಬಹು ಮಾದರಿಯ ಸರಣಿಯಲ್ಲಿ ಪಾಲ್ಗೊಂಡಿದೆ.
ಈ ವೇಳೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರೊಂದಿಗೆ ಅಜಿತ್ ಅಗರ್ಕರ್ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಏಕದಿನ ಸರಣಿಯು ಪ್ರಾರಂಭವಾಗುವ ಮೊದಲು 2023ರ ವಿಶ್ವಕಪ್‌ಗೆ ಪ್ರಮುಖ 20 ಆಟಗಾರರ ತಂಡವನ್ನು ಅಂತಿಮಗೊಳಿಸಲು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಬಯಸಿದ್ದಾರೆ ಎಂದು ವರದಿಯಾಗಿದೆ.
ಜುಲೈ 27ರಂದು ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ಅಜಿತ್ ಅಗರ್ಕರ್ ಟ್ರಿನಿಡಾಡ್ ತಲುಪುವ ನಿರೀಕ್ಷೆಯಿದೆ.
ಈ ಬೆಳವಣಿಗೆಯ ಬಗ್ಗೆ ಬಿಸಿಸಿಐ ಮೂಲವು ಇದೇ ಮಾಹಿತಿಯನ್ನು ಬಹಿರಂಗಪಡಿಸಿದ್ದು, "ಸಲಿಲ್ ಅಂಕೋಲಾ ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿದ್ದಾರೆ. ಆದರೆ ಟೆಸ್ಟ್ ಸರಣಿ ಮುಗಿದ ನಂತರ ಅವರು ಹಿಂತಿರುಗುತ್ತಾರೆ. ಅಜಿತ್ ಅಗರ್ಕರ್ ಏಕದಿನ ಸರಣಿ ಆರಂಭಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ," ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮುಂಬರುವ ದಿನಗಳಲ್ಲಿ ಭಾರತ ತಂಡದ ಆಯ್ಕೆಯ ಕುರಿತು ಬಿಸಿಸಿಐ ಮತ್ತು ತಂಡದಲ್ಲಿ ಹಲವು ಪ್ರಮುಖ ಚರ್ಚೆಗಳು ನಡೆಯಲಿವೆ. ಇದೇ ವೇಳೆ ತಂಡದಲ್ಲಿ ಯಾವುದೇ ದೊಡ್ಡ ಆಶ್ಚರ್ಯಕರ ಬದಲಾವಣೆಗಳಿಲ್ಲ ಎಂದು ನಿರೀಕ್ಷಿಸಲಾಗಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯಂತ ಭರವಸೆಯ ಯುವ ತಂಡ ಆಡಲಿದೆ.
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಪುನರಾಗಮನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 29 ವರ್ಷದ ಬುಮ್ರಾ ಗಾಯದ ಸಮಸ್ಯೆಯಿಂದ ಸುದೀರ್ಘ ಸಮಯದವರೆಗೆ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ.
ಸದ್ಯ ಜಸ್ಪ್ರೀತ್ ಬುಮ್ರಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಪೂರ್ಣಗೊಳಿಸಿದ್ದಾರೆ ಮತ್ತು ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಭರವಸೆಯನ್ನು ಭಾರತ ತಂಡ ಹೊಂದಿದೆ.
ಇನ್ನು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಿರುವಾಗ ಕೆಎಲ್ ರಾಹುಲ್ ತೊಡೆಗೆ ಗಾಯ ಮಾಡಿಕೊಂಡಿದ್ದರು. ಅವರೂ ಕೂಡ ಎನ್‌ಸಿಎನಲ್ಲಿ ತರಬೇತಿ ಆರಂಭಿಸಿದ್ದು ತಂಡಕ್ಕೆ ಸೇರಿಸಿಕೊಳ್ಳಬಹುದು.
ಮುಂಬರುವ 2023ರ ಏಷ್ಯಾ ಕಪ್ ಭಾರತದ ತಂಡದ ಸಂಯೋಜನೆಗೆ ಉತ್ತಮ ರೂಪ ನೀಡಲಿದೆ. ನಂತರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಯಾವ ತಂಡವನ್ನು ಕಣಕ್ಕಿಳಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.