ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಭಾರತದ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇದನ್ನು ಅವರ ಅಂಕಿಸಂಖ್ಯೆಗಳೇ ಖಚಿತಪಡಿಸುತ್ತವೆ. ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಂದಲ್ಲ, ಎರಡಲ್ಲ ಹಲವು ದಾಖಲೆಗಳ ಸರದಾರನಾಗಿದ್ದಾರೆ.
ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 13000 ರನ್ ಗಳಿಸಿದ ವಿಶ್ವದ 5ನೇ ಹಾಗೂ ಭಾರತದ ಎರಡನೇ ಆಟಗಾರನಾದರು.
ಇದೀಗ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಪ್ರಸ್ತುತ ಪೀಳಿಗೆಯ ತಮ್ಮ ನೆಚ್ಚಿನ ಆಟಗಾರ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಕೆಲವು ವರ್ಷಗಳಲ್ಲಿ ಬೆನ್ ಸ್ಟೋಕ್ಸ್ ಅವರೊಂದಿಗೆ ಕೆಲವು ಪೈಪೋಟಿಯುತ ಹಣಾಹಣಿಗಳಲ್ಲಿ ಆಡಿದ್ದಾರೆ. ಆದರೆ ಇಂಗ್ಲೆಂಡ್ ಟೆಸ್ಟ್ ನಾಯಕನ ಕ್ರಿಕೆಟ್ ಆಡುವ ರೀತಿಯನ್ನು ಮೆಚ್ಚಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಪ್ರಾಮಾಣಿಕವಾಗಿ ಮಾತನಾಡಿರುವ ವಿರಾಟ್ ಕೊಹ್ಲಿ, ನಾನು ಬೆಳೆಯುತ್ತಿರುವ ದಿನಗಳ ಮತ್ತು ತಮ್ಮ ಪ್ರಸ್ತುತ ನೆಚ್ಚಿನ ಕ್ರಿಕೆಟಿಗನ ಬಗ್ಗೆ ಬಹಿರಂಗಪಡಿಸಿದರು.
"ನನ್ನ ಕ್ರಿಕೆಟ್ ಬೆಳೆಯುತ್ತಿರುವ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಆರಾಧ್ಯರಾಗಿದ್ದರು ಮತ್ತು ಪ್ರಸ್ತುತ ವಿಶ್ವದ ನನ್ನ ನೆಚ್ಚಿನ ಕ್ರಿಕೆಟಿಗ ಬೆನ್ ಸ್ಟೋಕ್ಸ್," ಎಂದು ನಗೆ ಬೀರಿದರು.
ಇನ್ನು ವಿರಾಟ್ ಕೊಹ್ಲಿ ತಮ್ಮ ಜರ್ಸಿ ನಂ.18 ಅನ್ನು ಹೇಗೆ ಪಡೆದರು ಎಂಬುದರ ಕುರಿತ ಕುತೂಹಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ, ಆ ಕುರಿತು ಮಾತನಾಡಿದರು.
"ನನ್ನ ಜರ್ಸಿ ಸಂಖ್ಯೆ 18 ಮತ್ತು ಈ ಸಂಖ್ಯೆಯ ಹಿಂದೆ ಯಾವುದೇ ಕಥೆಯಿಲ್ಲ. ನಾನು ಮೊದಲ ಬಾರಿಗೆ ಅಂಡರ್-19 ಭಾರತದ ಜೆರ್ಸಿಯನ್ನು ಪಡೆದಾಗ, ಈ ಸಂಖ್ಯೆಯನ್ನು ನಾನು ಪಡೆದುಕೊಂಡಿದ್ದೇನೆ ಮತ್ತು ಆಗಿನಿಂದಲೂ ನಾನು 18 ನಂಬರ್‌ನ ಜೆರ್ಸಿಯನ್ನು ಧರಿಸಲು ಪ್ರಾರಂಭಿಸಿದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ಇದೇ ವೇಳೆ ವಿರಾಟ್ ಕೊಹ್ಲಿ ಅವರು ತಮ್ಮ ನಿಕ್ ನೇಮ್ (ಅಡ್ಡಹೆಸರು) ಹೇಗೆ ಪಡೆದರು ಎಂಬುದರ ಕುರಿತು ಮಾತನಾಡಿದರು. ಎಂಎಸ್ ಧೋನಿ ಭಾರತ ತಂಡದ ನಾಯಕರಾಗಿದ್ದಾಗ "ಚೀಕು' ಎಂಬ ಹೆಸರು ವಿರಾಟ್ ಕೊಹ್ಲಿಗೆ ಬಂದಿತು. ಧೋನಿ ಸ್ಟಂಪ್‌ನ ಹಿಂದಿನಿಂದ ಫೀಲ್ಡ್ ಪ್ಲೇಸ್‌ಮೆಂಟ್ ಮಾಡುವಾಗ ಕೊಹ್ಲಿಯನ್ನು "ಚೀಕು' ಎಂದು ಕರೆದಿದ್ದು ಸ್ಟಂಪ್ ಮೈಕ್‌ನಿಂದ ಕೇಳಿಸಿತ್ತು.
ಅಡ್ಡಹೆಸರು ಮತ್ತು ಅದರ ಮೂಲದ ಹಿಂದಿನ ಕಾರಣವನ್ನು ವಿವರಿಸಿದ ವಿರಾಟ್ ಕೊಹ್ಲಿ, "ನನ್ನ ಅಡ್ಡಹೆಸರು ಚೀಕು, ಏಕೆಂದರೆ ನನ್ನ ಕಿವಿಗಳು ದೊಡ್ಡದಾಗಿರುವುದರಿಂದ ರಾಜ್ಯ ಕೋಚ್ ನನಗೆ ಆ ಹೆಸರನ್ನು ಇಟ್ಟರು. ನಾನು ಒಮ್ಮೆ ನನ್ನ ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸುತ್ತಿದ್ದೆ ಮತ್ತು ದೊಡ್ಡ ಕಿವಿಗಳುಳ್ಳ ಚೀಕು ಎಂಬ ಮೊಲದ ಪಾತ್ರದ ಚಂಪಕ್ ಎಂಬ ಕಾಮಿಕ್ ಇತ್ತು, ಅದು ಪ್ರಸಿದ್ಧವಾಯಿತು. ನಂತರ ಮಹಿ ಭಾಯಿ ಆ ಹೆಸರನ್ನು ಸ್ಟಂಪ್ ಮೈಕ್ ಹತ್ತಿರ ಕೂಗಲು ಪ್ರಾರಂಭಿಸಿದರು," ಎಂದರು.
ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಶಾಟ್ ಮತ್ತು ಕೆಲವು ವರ್ಷಗಳಿಂದ ಎದುರಿಸುತ್ತಿರುವ ಬೌಲರ್‌ಗಳ ಬಗ್ಗೆಯೂ ಮಾತನಾಡಿ, "ಎಡಗೈ ಸ್ಪಿನ್ನರ್ ವಿರುದ್ಧ ಇನ್‌ಸೈಡ್-ಔಟ್ ಕವರ್ ಮೇಲೆ ಆಡುವುದು ನನ್ನ ನೆಚ್ಚಿನ ಶಾಟ್ ಆಗಿದೆ. ನಾನು ಮೊದಲು ಆ ಶಾಟ್ ಅನ್ನು 12 ವರ್ಷದವನಿದ್ದಾಗ ಆಡಿದ್ದೇನೆ," ಎಂದು ತಿಳಿಸಿದರು.
"ಜೇಮ್ಸ್ ಆಂಡರ್ಸನ್ ಮತ್ತು ಪ್ಯಾಟ್ ಕಮ್ಮಿನ್ಸ್ ನಡುವೆ ನಾನು ಉತ್ತಮ ಪೈಪೋಟಿ ಎದುರಿಸಿದ ಒಬ್ಬ ಆಟಗಾರ. ಇತ್ತೀಚಿನ ವರ್ಷಗಳಲ್ಲಿ ನಾವು ಕೆಲವು ಉತ್ತಮ ಪೈಪೋಟಿ ಹೊಂದಿದ್ದೇವೆ," ಎಂದು ವಿರಾಟ್ ಕೊಹ್ಲಿ ವಿವರಿಸಿದರು.
ಕೊಲಂಬೊದಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ಫೋರ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 47ನೇ ಏಕದಿನ ಶತಕವನ್ನು ಬಾರಿಸಿದರು.