ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ತದಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಕಳಪೆ ಪ್ರದರ್ಶನ ನೀಡಿ ಸೋಲು ಕಂಡಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾದ ಕೆಲ ಆಟಗಾರರ ಸ್ಥಾನದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಕೆಲ ದಿನಗಳ ಸುದೀರ್ಘ ವಿಶ್ರಾಂತಿಯಲ್ಲಿದ್ದು ಬಳಿಕ ಮತ್ತೊಂದು ಸುದೀರ್ಘ ಪ್ರವಾಸಕ್ಕೆ ಸಜ್ಜಾಗಲಿದೆ.
ಹೌದು ಟೀಮ್ ಇಂಡಿಯಾ ಮುಂದಿನ ತಿಂಗಳು ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದ್ದು ಮೂರು ಮಾದರಿಯಲ್ಲಿಯೂ ಆಡಲಿದೆ. ಅದರಲ್ಲೂ ಮೊದಲಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದ್ದು ಈ ಸರಣಿ ಈಗ ಕುತೂಹಲ ಕೆರಳಿಸಿದೆ. ವೆಸ್ಟ್ ಇಂಡೀಸ್‌ಗೆ ತೆರಳುವ ಈ ಪ್ರವಾಸದಲ್ಲಿ ಟೀಮ್ ಇಂಡಿಯಾದ ಕೆಲ ಯುವ ಆಟಗಾರರಿಗೆ ಅವಕಾಶ ನೀಡುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ ಎನಿಸಿಕೊಳ್ಳಲಿದೆ.

ಋತುರಾಜ್ ಗಾಯಕ್ವಾಡ್
ಕಳೆದ ಕೆಲ ವರ್ಷಗಳಲ್ಲಿ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸ್ಥಿರವಾಗಿ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ ಋತುರಾಜ್ ಗಾಯಕ್ವಾಡ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಕೌಶಲ್ಯ ಹಾಗೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಕಾರಣ ಟೆಸ್ಟ್ ಮಾದರಿಗೆ ಅತ್ಯಂತ ಸೂಕ್ತ ಆಟಗಾರ ಎಂಬ ಭಾವನೆ ಮೂಡಿಸಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಋತುರಾಜ್‌ಗೆ ಅವಕಾಶ ದೊರೆತರೆ ಅದು ತಂಡದ ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ ಎನಿಸಿಕೊಳ್ಳಬಹುದು.
ಯಶಸ್ವಿ ಜೈಸ್ವಾಲ್
ಯುವ ಆಟಗಾರ ಯಶಸ್ವಿ ಜೈಸ್ವಾಲ್ ಈಗಾಗಲೇ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ತನ್ನ ಸಾಮರ್ರ್ಥಯ ಎಂಥಾ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ ನೀಡಿರುವ ಅಮೋಘ ಪ್ರದರ್ಶನದಿಂದಾಗಿ ಭಾರತದ ಟಿ20 ತಂಡದಲ್ಲಿ ಅವಕಾಶ ದೊರೆಯಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಇನ್ನು ಟಿ20 ಮಾತ್ರವಲ್ಲದೆ ಯಶಸ್ವಿ ಜೈಸ್ವಾಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಮಿಂಚಿದ್ದಾರೆ.
ಆಡಿರುವ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ ಜೈಸ್ವಾಲ್ 80.21ರ ಅಮೋಘ ಸರಾಸರಿಯಲ್ಲಿ 1845 ರನ್‌ಗಳನ್ನು ಗಳಿಸಿದ್ದಾರೆ. ಕೇವಲ 15 ಪಂದ್ಯಗಳಲ್ಲಿ 9 ಶತಕ ಗಳಿಸಿರುವುದು ಗಳಿಸಿರುವುದು ಜೈಸ್ವಾಲ್ ಅವರಲ್ಲಿ ದೀರ್ಘಾವಧಿಯ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ. ಇದು ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ಬಹಳ ಅಗತ್ಯ. ಜೈಸ್ವಾಲ್ ದೇಶೀಯ ಕ್ರಿಕೆಟ್‌ನಲ್ಲಿ ಇಂಥಾ ಅದ್ಭುತ ಸಾಧನೆ ಮಾಡಿದ ಕಾರಣ ಈ ಯುವ ಆಟಗಾರ ಮುಂದಿನ ತಿಂಗಳು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರೆ ಅಚ್ಚರಿಯಿಲ್ಲ.
ಸರ್ಫರಾಜ್ ಖಾನ್
ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಯುವ ಆಟಗಾರ ಎಂದರೆ ಅದು ಸರ್ಫರಾಜ್ ಖಾನ್. ದೇಶೀಯ ಕ್ರಿಕೆಟ್‌ನಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್‌ಗೆ ಈವರೆಗೆ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ದೊರೆತಿಲ್ಲ ಎಂಬುದೇ ಆಶ್ಚರ್ಯ. ಬಾಂಗ್ಲಾದೇಶ ಹಾಗೂ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಕೆಲ ಹಿರಿಯ ಆಟಗಾರರ ಅಲಭ್ಯತೆಯಲ್ಲಿಯೂ ಸರ್ಫರಾಜ್‌ಗೆ ಭಾರತ ತಂಡದಲ್ಲಿ ಅವಕಾಶ ದೊರೆತಿರಲಿಲ್ಲ. ಇದೀಗ ಮತ್ತೊಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆವೃತ್ತಿ ಆರಂಭವಾಗಿದೆ. ಹೀಗಾಗಿ ಈ ಮುಂಬೈನ ಯುವ ಆಟಗಾರನಿಗೆ ಅವಕಾಶ ದೊರೆಯುವ ನಿರೀಕ್ಷೆಯಿಟ್ಟುಕೊಳ್ಳಬಹುದು.