IND vs NZ : ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ಸಜ್ಜು: ದ್ರಾವಿಡ್‌ಗೆ ವಿಶ್ರಾಂತಿ, ಲಕ್ಷ್ಮಣ್ ಹಂಗಾಮಿ ಕೋಚ್

ಟಿ20 ವಿಶ್ವಕಪ್‌ನಲ್ಲಿ ಭಾರತದ ಹೋರಾಟ ಸೆಮಿಫೈನಲ್‌ಗೆ ಅಂತ್ಯವಾಗಿದೆ. ಹೀಗಾಗಿ ಭಾರತ ತಂಡದ ಚಿತ್ತ ಈಗ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವೈಟ್‌ಬಾಲ್ ಸರಣಿಯ ಮೇಲೆ ನೆಟ್ಟಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟಿ20 ತಂಡ ಹಾಗೂ ಶಿಖರ್ ಧವನ್ ನೇತೃತ್ವದ ಏಕದಿನ ತಂಡವನ್ನು ಈ ಪ್ರವಾಸಕ್ಕೆ ಈಗಾಗಲೇ ಘೋಷಣೆ ಮಾಡಲಾಗಿದ್ದು ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ಕೋಚ್ ರಾಹುಲ್ ದ್ರಾವಿಡ್‌ಗೆ ಕೂಡ ಈ ವೈಟ್‌ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಈ ಸರಣಿಗೆ ಹಂಗಾಮಿ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 10 ವಿಕೆಟ್‌ಗಳ ಅಂತರದ ಭಾರೀ ಸೋಲು ಅನುಭವಿಸಿತು. ಈ ಮೂಲಕ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕನಸು ಮತ್ತೊಮ್ಮೆ ಭಗ್ನವಾಗಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ ಪಡೆಯನ್ನು ಎದುರಿಸಲಿದೆ.
ನವೆಂಬರ್ 18ರಿಂದ ಈ ವೈಟ್‌ಬಾಲ್ ಸರಣಿ ಆರಂಭವಾಗಲಿದ್ದು ನವೆಂಬರ್ 30ರಂದು ಅಂತಿಮ ಪಂದ್ಯ ನಡೆಯಲಿದೆ. ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಆರ್ ಅಶ್ವಿನ್‌ಗೆ ಕೂಡ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವಿವಿಎಸ್ ಲಕ್ಷ್ಮಣ್ ಮುಂದಾಳತ್ವದ ಕೋಚಿಂಗ್ ವಿಭಾಗ ಶೀಘ್ರದಲ್ಲೇ ಭಾರತೀಯ ತಂಡವನ್ನು ಸೇರಿಕೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ. ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾಣಿತ್ಕರ್, ಬೌಲಿಂಗ್ ಕೋಚ್ ಆಗಿ ಸಿರಾಜ್ ಬಹುತುಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಇನ್ನು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಜಿಂಬಾಬ್ವೆ ಮತ್ತು ಐರ್ಲೆಂಡ್‌ಗೆ ಭಾರತ ತಂಡ ಪ್ರವಾಸ ಕೈಗೊಂಡಿದ್ದಾಗ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗಷ್ಟೇ ತವರಿನಲ್ಲಿ ಏಕದಿನ ಸರಣಿ ನಡೆದಾಗ ಲಕ್ಷ್ಮಣ್ ಭಾರತ ತಂಡದ ಕೋಚ್ ಆಗಿ ಜವಾಬ್ಧಾರಿ ನಿರ್ವಹಿಸಿದ್ದಾರೆ.
ಇನ್ನು ಮೂರು ಪಂದ್ಯಗಳ ಟಿ20 ಸರಣಿ ವೆಲ್ಲಿಂಗ್ಟನ್ (ನವೆಂಬರ್ 18), ಮೌಂಟ್ ಮೌಂಗನ್ಯೂಯ್ (ನವೆಂಬರ್ 20) ಮತ್ತು ನೇಪಿಯರ್ (ನವೆಂಬರ್ 22) ನಡೆಯಲಿದ್ದು ಹಾರ್ದಿಕ್ ಪಾಂಡ್ಯ ಈ ಚುಟುಕು ಸರಣಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಅನುಭವಿ ಆಟಗಾರ ಶಿಖರ್ ಧವನ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದು ತಂಡದ ನಾಯತಕತ್ವ ವಹಿಸಲಿದ್ದಾರೆ. ಏಕದಿನ ಸರಣಿಯ ಪಂದ್ಯಗಳು ಆಕ್ಲೆಂಡ್, ಹ್ಯಾಮಿಲ್ಟನ್ ಮತ್ತು ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿದ್ದು ನವೆಂಬರ್ 25, 27 ಮತ್ತು 30ರಂದು ಈ ಪಂದ್ಯಗಳು ಆಯೋಜನೆಯಾಗಲಿದೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮುಕ್ತಾಯದ ಬಳಿಕ ಭಾರತ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 4ರಿಂದ ಬಾಂಗ್ಲಾದೇಶ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದ್ದು ಈ ಸರಣಿಗೆ ಭಾರತದ ಖಾಯಂ ನಾಯಕ ರೋಹಿತ್ ಶರ್ಮಾ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಮರಳಲಿದ್ದಾರೆ. ಈ ಪ್ರವಾಸದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications