
ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಜನವರಿ 7ರ ಗುರುವಾರ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದ ಮೂಲಕ ಭಾರತದ ವೇಗಿ ನವದೀಪ್ ಸೈನಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಗಾಯಕ್ಕೀಡಾಗಿರುವ ಉಮೇಶ್ ಯಾದವ್ ಜಾಗಕ್ಕೆ ಸೈನಿ ಬಂದಿದ್ದಾರೆ.
ಬುಧವಾರ (ಜನವರಿ 6) ಮಧ್ಯಾಹ್ನ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಂಡಿಯಾ ಪ್ಲೇಯಿಂಗ್ XI ಪ್ರಕಟಿಸಿತ್ತು. ಇದರಲ್ಲಿ ನವದೀಪ್ ಸೈನಿ ಹೆಸರೂ ಇತ್ತು. ಟೆಸ್ಟ್ ಪಾದಾರ್ಪಣೆಯ ಖುಷಿಯಲ್ಲಿರುವ ಸೈನಿ ಭರ್ಜರಿಯಾಗಿ ಅಭ್ಯಾಸ ನಡೆಸಿದ್ದಾರೆ.
ಮೂರನೇ ಟೆಸ್ಟ್ ನಿಮಿತ್ತ 28ರ ಹರೆಯದ ಡೆಲ್ಲಿ ಬೌಲರ್ ನವದೀಪ್ ಸೈನಿ ವೇಗದ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿ ಎದುರಲ್ಲಿ ಸೈನಿ ಉತ್ತಮ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.
ನೆಟ್‌ನಲ್ಲಿ ಸೈನಿ ಬೆವರಿಳಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಫಾಸ್ಟ್ ಆ್ಯಂಡ್ ಫ್ಯೂರಿಯಸ್. ನಾಳೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನವದೀಪ್ ಸೈನಿ ಟೆಸ್ಟ್ ಪಾದಾರ್ಪಣೆಗೆ ಸಜ್ಜಾಗಿದ್ದಾರೆ,' ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳಲಾಗಿದೆ.