
ನವದೆಹಲಿ, ಮಾರ್ಚ್ 12: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಆರಂಭದಲ್ಲಿ ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ನಿರಾಶೆಗೊಳಿಸಿದ್ದು ಖರೆ. ಆದರೆ ಇತ್ತಂಡಗಳ ನಡುವಿನ 4ನೇ ಏಕದಿನ ಪಂದ್ಯದಲ್ಲಿ ರೋಹಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. 5ನೇ ಪಂದ್ಯದಲ್ಲೂ ರೋಹಿತ್‌ಗೆ ದಾಖಲೆ ಬರೆಯುವ ಅವಕಾಶವಿದೆ.
ಮೊಹಾಲಿಯಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ರೋಹಿತ್-ಧವನ್ ಜೋಡಿ ಉತ್ತಮ ಜೊತೆಯಾಟಕ್ಕಾಗಿ ಭಾರತೀಯರ ಗಮನ ಸೆಳೆದಿತ್ತು. ಪಂದ್ಯದಲ್ಲಿ 193 ಜೊತೆಯಾಟದ ಮೂಲಕ ಈ ಜೋಡಿ ಆಸ್ಟ್ರೇಲಿಯಾ ವಿರುದ್ಧ 1,000 ರನ್ ಪೂರೈಸಿದ ಭಾರತದ ಮೊದಲ ಜೋಡಿಯಾಗಿ ಗುರುತಿಸಿಕೊಂಡಿತ್ತು.
ಆಸ್ಟ್ರೇಲಿಯಾ ವಿರುದ್ಧ ಏಕದಿನದಲ್ಲಿ ಉತ್ತಮ ಜೊತೆಯಾಟ ನೀಡಿದ ಭಾರತದ ಮತ್ತೊಂದು ಜೋಡಿಯೆಂದರೆ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್. ಸಚಿನ್-ಗಂಗೂಲಿ ಜೋಡಿ 827 ರನ್ ದಾಖಲೆ ಹೊಂದಿದೆ. ಇದರೊಂದಿಗೆ ರೋಹಿತ್ ಅವರು ಗಂಗೂಲಿಯ ಮತ್ತೊಂದು ದಾಖಲೆ ಸರಿದೂಗಿಸುವುದರಲ್ಲಿದ್ದಾರೆ.
ದೆಹಲಿಯಲ್ಲಿ ನಡೆಯುವ ಭಾರತ-ಆಸ್ಟ್ರೇಲಿಯಾ 5ನೇ ಪಂದ್ಯದಲ್ಲಿ ಮುಂಬೈ ಕ್ರಿಕೆಟಿಗ ಶರ್ಮಾ ಬರೀ 46 ರನ್ ಸೇರಿಸಿದರೂ ಸಾಕು. 'ಏಕದಿನದಲ್ಲಿ ಅತೀ ವೇಗವಾಗಿ 8,000 ರನ್ ಗುರಿ ಮುಟ್ಟಿದ ಮೂರನೇ ಭಾರತೀಯ'ನಾಗಿ ರೋಹಿತ್ ಗುರಿತಿಸಿಕೊಳ್ಳಲಿದ್ದಾರೆ.
ಮಾಜಿ ನಾಯಕ ಸೌರವ್ ಗಂಗೂಲಿ ಏಕದಿನ 8000 ರನ್ ಪೂರೈಸಲು 200 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ರೋಹಿತ್ ಕೂಡ 200 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮೆರೆದಂತಾಗುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ ಐದು ಪಂದ್ಯಗಳ ಏಕದಿನ ಸರಣಿ 2-2ರಿಂದ ಸಮಬಲಗೊಂಡಿದ್ದು, ಭಾರತ ಪಂದ್ಯ ಗೆದ್ದರೆ ಸರಣಿ ನಮ್ಮ ವಶವಾಗಲಿದೆ. ಒಟ್ಟಿನಲ್ಲಿ ದೆಹಲಿ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.