ಸೂರ್ಯಕುಮಾರ್ ಅಬ್ಬರದ ಶತಕ ವ್ಯರ್ಥ: ವೈಟ್‌ವಾಶ್ ಮುಖಭಂಗ ತಪ್ಪಿಸಿಕೊಂಡ ಇಂಗ್ಲೆಂಡ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಅದ್ಭುತ ಹೋರಾಟ ನಡೆಸಿ ಸೋಲು ಅನುಭವಿಸಿದೆ. ಈ ಮೂಲಕ ಆತಿಥೆಯ ಇಂಗ್ಲೆಂಡ್ ತಂಡ ವೈಟ್‌ವಾಶ್ ಮುಖಭಂಗದಿಂದ ಪಾರಾಗಿದೆ. ಭಾರತದ ಪರವಾಗಿ ಸೂರ್ಯಕುಮಾರ್ ಯಾದವ್ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಶತಕ ಸಿಡಿಸಿದರೂ ಅಂತಿಮ ಹಂತದಲ್ಲಿ ಭಾರತ ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ವಿಫಲವಾದರು.
ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ಆರಂಭದಲ್ಲಿಯೇ ಅಗ್ರ ಕ್ರಮಾಂಕದ ಮೂವರು ದಾಂಡಿಗರನ್ನು ಕಳೆದುಕೊಂಡಿತು. ಆದರೆ ನಂತರ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಐಯ್ಯರ್ ಅದ್ಭುತ ಜೊತೆಯಾಟವನ್ನು ನೀಡಿದರು. ಶ್ರೇಯಸ್ ಐಯ್ಯರ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದಿದ್ದರೂ ಸೂರ್ಯಕುಮಾರ್ ಯಾದವ್‌ಗೆ ಉತ್ತಮವಾಗಿ ಸಾಥ್ ನೀಡುವಲ್ಲಿ ಯಶಸ್ವಿಯಾದರು.

ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆಘಾತ
ಭಾರತ ಈ ಪಂದ್ಯದಲ್ಲಿ ಗೆಲ್ಲಲು 216 ರನ್‌ಗಳ ಬೃಹತ್ ಗುರಿಯನ್ನು ಪಡೆದಿತ್ತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕಳಪೆ ಆರಂಭವನ್ನು ಪಡೆಯಿತು. ಆರಂಭಕ ಆಟಗಾರ ರಿಷಭ್ ಪಂತ್ 1 ರನ್‌ಗಳಿಸಿ ವಿಎಕಟ್ ಕಳೆದುಕೊಂಡರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 11 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ 31 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜೊತೆಯಾಗಿದ್ದು ಶ್ರೇಯಸ್ ಐಯ್ಯರ್ ಹಾಗೂ ಸೂರ್ಯ ಕುಮಾರ್ ಯಾದವ್ ಜೋಡಿ. ಈ ಜೋಡಿ ಬರೊಬ್ಬರಿ 120 ರನ್‌ಗಳ ಜೊತೆಯಾಟ ನೀಡಿದರು.

ಏಕಾಂಗಿಯಾಗಿ ಹೋರಾಡಿದ ಸೂರ್ಯ
ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ದಾಳಿಯನ್ನು ಮೈದಾನದ ನಾಲ್ಕು ದಿಕ್ಕಿಗೂ ಅಟ್ಟಿದ ಸೂರ್ಯಕುಮಾರ್ ಯಾದವ್ ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ. 4ನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟ ಸೂರ್ಯ- ಐಯ್ಯರ್ ಮಧ್ಯೆ ಬಂದಿತ್ತಾದರೂ ಅದರಲ್ಲಿ ಐಯ್ಯರ್ ಕೊಡುಗೆ 28 ರನ್ ಮಾತ್ರ. ಶ್ರೇಯಸ್ ಐಯ್ಯರ್ ವಿಕೆಟ್ ಕಳೆದುಕೊಂಡ ನಂತರವೂ ಹೋರಾಟ ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಸ್ಪೋಟಕ ಶತಕ ಸಿಡಿಸಿದರು. 55 ಎಸೆತ ಎದುರಿಸಿದ ಸೂರ್ಯಕುಮಾರ್ ಯಾದವ್ 117 ರನ್‌ಗಳಿಸಿ 19ನೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಭಾರತ ತಂಡದ ಹೋರಾಟ ಅಂತ್ಯವಾಯಿತು.

ಇಂಗ್ಲೆಂಡ್ ಸ್ಪೋಟಕ ಬ್ಯಾಟಿಂಗ್
ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಅಮೋಘ ಪ್ರದರ್ಶನ ನೀಡಿತು. ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟನ್ ಅವರ ಅಮೋಘ ಪ್ರದರ್ಶನದಿಂದಾಗಿ ಇಂಗ್ಲೆಂಡ್ 215 ರನ್‌ಗಳನ್ನು ಗಳಿಸಿತು. ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಅಬ್ಬರಿಸುವ ಮುನ್ಸೂಚನೆ ನೀಡಿದರಾದರೂ ಆವೇಶ್ ಖಾನ್ ಅವರನ್ನು 18 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಜೇಸನ್ ರಾಯ್ ಕೂಡ 27 ರನ್‌ಗಳಿಗೆ ತಮ್ಮ ಆಟವನ್ನು ಅಂತ್ಯಗೊಳಿಸಿದರು. ಈ ಮಧ್ಯೆ ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದ ಸಾಲ್ಟ್ ಕೂಡ ವಿಕೆಟ್ ಕಳೆದುಕೊಂಡರು. ಆದರೆ ನಂತರ ಜೊತೆಯಾದ ಡೇವಿಡ್ ಮಲನ್ ಹಾಗೂ ಲಿವಿಂಗ್‌ಸ್ಟನ್ ಸ್ಪೋಟಕ ಪ್ರದರ್ಶನ ನೀಡಿದರು.

ಆಡುವ ಬಳಗ ಹೀಗಿದೆ
ಇಂಗ್ಲೆಂಡ್ ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಡೇವಿಡ್ ಮಲನ್, ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರೀಸ್ ಟೋಪ್ಲಿ, ರಿಚರ್ಡ್ ಗ್ಲೀಸನ್
ಬೆಂಚ್: ಟೈಮಲ್ ಮಿಲ್ಸ್, ಸ್ಯಾಮ್ ಕರನ್, ಮ್ಯಾಥ್ಯೂ ಪಾರ್ಕಿನ್ಸನ್
ಭಾರತ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಆವೇಶ್ ಖಾನ್, ಉಮ್ರಾನ್ ಮಲಿಕ್, ರವಿ ಬಿಷ್ಣೋಯ್
ಬೆಂಚ್: ದೀಪಕ್ ಹೂಡಾ, ಇಶಾನ್ ಕಿಶನ್, ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications