
ಪೂಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಆಡಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಆದರೆ ಅಂಗ್ಲರೆದುರಿನ ಏಕದಿನ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರಾದ ರೋಹಿತ್, ಶಿಖರ್ ಧವನ್ ಮತ್ತು ಕೊಹ್ಲಿ ಟಾಪ್ ಆರ್ಡರ್‌ನಲ್ಲಿ ಬರಲಿದ್ದಾರೆ.
ಮಂಗಳವಾರ (ಮಾರ್ಚ್ 23) ಮಹಾರಾಷ್ಟ್ರ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂ ಪೂಣೆಯಲ್ಲಿ ಆರಂಭಗೊಳ್ಳಲಿರುವ ಮೊದಲನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಪ್ರಮುಖ ಅನುಭವಿಗಳೆಂದರೆ ರೋಹಿತ್ ಶರ್ಮಾ, ಶಿಖದರ್ ಧವನ್ ಮತ್ತು ವಿರಾಟ್ ಕೊಹ್ಲಿ ಮೂವರೇ. ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆ ತಾರದೆ ಹಿಂದಿನ ಲಯಕ್ಕೆ ಭಾರತ ಮರಳುವ ನೀರೀಕ್ಷೆಯಿದೆ.
ಏಕದಿನ ಕ್ರಿಕೆಟ್‌ನಲ್ಲಿ ಗಬ್ಬರ್ ಸಿಂಗ್ ಧವನ್ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. 139 ಏಕದಿನ ಪಂದ್ಯಗಳಲ್ಲಿ ಧವನ್ 45.02ರ ಸರಾಸರಿಯಂತೆ 5808 ರನ್ ಗಳಿಸಿದ್ದಾರೆ. ಸದ್ಯದ ಭಾರತದ ಆರಂಭಿಕ ಜೋಡಿಯಲ್ಲಿ ಧವನ್-ರೋಹಿತ್ 45.3ರ ಸರಾಸರಿಯಂತೆ 4802 ರನ್ ಗಳಿಸಿದ್ದಾರೆ. ಹೀಗಾಗಿ ಈ ಜೋಡಿ ಸಾರ್ವಕಾಲಿಕ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಏಕದಿನದಲ್ಲಿ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಭಾರತದ ಸೌರವ್ ಗಂಗೂಲಿ-ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ಆ್ಯಂಡಂ ಗಿಲ್‌ಕ್ರಿಸ್ಟ್-ಮ್ಯಾಥ್ಯೂ ಹೇಡನ್ ಮತ್ತು ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್-ಡೆಸ್ಮಂಡ್ ಹೇನ್ಸ್ ಜೋಡಿ ಅತ್ಯಧಿಕ ರನ್ ದಾಖಲೆಗಳನ್ನು ಹೊಂದಿದೆ.