ಸೆಮಿಫೈನಲ್‌ಗೂ ಮುನ್ನ ಭಾರತ ತಂಡಕ್ಕೆ ಈ ಆಟಗಾರನ ಫಾರ್ಮ್ ಬಗ್ಗೆಯೇ ಚಿಂತೆ!

ಹಾರ್ದಿಕ್ ಪಾಂಡ್ಯ ಸದ್ಯ ಟೀಂ ಇಂಡಿಯಾದ ಪ್ರಮುಖ ಆಲ್‌ರೌಂಡರ್, ಟಿ20 ವಿಶ್ವಕಪ್ 2022 ಆರಂಭಕ್ಕೆ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು.
ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಇನ್ನೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇದುವರೆಗೂ ಆಡಿರುವ ಐದು ಪಂದ್ಯಗಳಲ್ಲಿ 7.46 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿರುವ ಅವರು 8 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶ ಕಂಡಿದ್ದಾರೆ. ಆದರೆ, ಅವರ ಬ್ಯಾಟಿಂಗ್ ಉತ್ತಮವಾಗಿಲ್ಲ. 5 ಪಂದ್ಯಗಳಲ್ಲಿ 101.56 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 65 ರನ್ ಗಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ವೈಫಲ್ಯ ಟೀಂ ಇಂಡಿಯಾದ ಮೇಲೆ ಪರಿಣಾಮ ಬೀರಿಲ್ಲವಾದರೂ, ಮುಂದಿನ ಪಂದ್ಯ ಬಹಲ ಮಹತ್ವದ್ದಾಗಿರುವುದರಿಂದ ಹಾರ್ದಿಕ್ ಪಾಂಡ್ಯ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಪಾಂಡ್ಯ ಭಾರತದ ಪ್ರಮುಖ ಬ್ಯಾಟರ್ ಆಗಿದ್ದಾರೆ.
ನವೆಂಬರ್ 10, ಗುರುವಾರ ಅಡಿಲೇಡ್‌ನಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣಸಲಿದ್ದು, ಪಾಂಡ್ಯ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಲೇಬೇಕಿದೆ. ತಂಡಕ್ಕೆ ಅವರ ಫಾರ್ಮ್ ಮುಖ್ಯ ಎನ್ನುವುದಕ್ಕೆ ಮೂರು ಕಾರಣಗಳನ್ನು ಪಟ್ಟಿಮಾಡಬಹುದಾಗಿದೆ.

ಕಾರ್ತಿಕ್, ಪಟೇಲ್ ಬ್ಯಾಟಿಂಗ್ ವೈಫಲ್ಯ
ದಿನೇಶ್ ಕಾರ್ತಿಕ್ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ, ಈವರೆಗಿನ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಅವರು ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಅವಕಾಶ ಪಡೆದರು. ಆದರೆ, ಪಂತ್ ಕೂಡ ರನ್ ಗಳಿಸುವಲ್ಲಿ ವಿಫಲರಾದರು.
ಅಕ್ಷರ್ ಪಟೇಲ್ ಕೂಡ ಬ್ಯಾಟ್‌ನೊಂದಿಗೆ ವಿಫಲರಾಗಿದ್ದಾರೆ. ಈ ಮೂವರು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿರುವುದರಿಂದ ಹಾರ್ದಿಕ್ ಪಾಂಡ್ಯ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಪಾಂಡ್ಯ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ ಅವರಿಂದ ಹೆಚ್ಚಿನ ರನ್ ನಿರೀಕ್ಷಿಸಲಾಗುತ್ತದೆ. ಅಂತಿಮ ಓವರ್ ಗಳಲ್ಲಿ ಸ್ಫೋಟಕವಾಗಿ ಆಡುವ ಶಕ್ತಿ ಪಾಂಡ್ಯ ಅವರಿಗೆ ಇರುವುದರಿಂದ ಅವರ ಸ್ಟ್ರೈಕ್ ರೇಟ್ ಕೂಡ ಮುಖ್ಯವಾಗುತ್ತದೆ.

ಮಾರ್ಕ್‌ವುಡ್ ಬೌಲಿಂಗ್ ಎದುರಿಸಬೇಕಿದೆ ಪಾಂಡ್ಯ
ಕಳೆದ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಕೈಗೊಂಡಾಗ ಮಾರ್ಕ್ ವುಡ್ ಮತ್ತು ಜೋಫ್ರಾ ಆರ್ಚರ್ ಹಾರ್ದಿಕ್ ಪಾಂಡ್ಯ ದೌರ್ಬಲ್ಯವನ್ನು ಗುರುತಿಸಿಕೊಂಡಿದ್ದರು. ಶಾರ್ಟ್ ಬಾಲ್ ಮತ್ತು ಹಾರ್ಡ್ ಲೆಂಗ್ತ್ ಎಸೆತಗಳ ಮೂಲಕ ಪಾಂಡ್ಯರನ್ನು ಔಟ್ ಮಾಡಿದ್ದಾರೆ. ಅವರ ವೇಗ ಮತ್ತು ಲೆಂಗ್ತ್ ಬಾಲ್ ಎದುರಿಸಲು ಪಾಂಡ್ಯ ಹೆಣಗಾಡಿದ್ದರು.
ಇಂಗ್ಲೆಂಡ್ ಹಾರ್ದಿಕ್ ಪಾಂಡ್ಯ ವಿರುದ್ಧ ಈಗಾಗಲೇ ರಣತಂತ್ರ ರೂಪಿಸಿರುತ್ತದೆ. ಆದ್ದರಿಂದ ಪಾಂಡ್ಯ ಇಂಗ್ಲೆಂಡ್ ಬೌಲಿಂಗ್ ಅನ್ನು ಹೇಗೆ ಎದುರಿಸುತ್ತಾರೆ ಎಂದು ನೋಡಬೇಕಿದೆ. ಮಾರ್ಕ್‌ವುಡ್ ಇದುವರೆಗೆ ಟಿ20 ವಿಶ್ವಕಪ್‌ನ ಅತ್ಯಂತ ವೇಗದ ಎಸೆತವನ್ನು 154.74 ಕಿ ಮೀ ವೇಗದಲ್ಲಿ ಬೌಲ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ, ಸೂರ್ಯ ಮೇಲೆ ಹೆಚ್ಚಿದ ಒತ್ತಡ
ಇನ್ನು ಈವರೆಗೆ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಿರುವ ಪಂದ್ಯಗಳಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮಾತ್ರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲೂ ಟೀಂ ಇಂಡಿಯಾ ಇವರ ಮೇಲೆಯೆ ಆಧಾರವಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ ವಿಫಲವಾಗಿರುವುದು ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮೇಲೆ ಹೆಚ್ಚಿನ ಒತ್ತಡ ಹೇರಿದೆ. ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ ಎನ್ನುವುದನ್ನೂ ಗಮನಿಸಬಹುದು.
ಇಂಗ್ಲೆಂಡ್ ವಿರುದ್ಧ ಗೆದ್ದರೆ ಮಾತ್ರ ಭಾರತದ ವಿಶ್ವಕಪ್ ಆಸೆ ಜೀವಂತವಾಗಿರಲಿದ್ದು, ಭಾರತ ಮಂಗಳವಾರದಿಂದ ಅಭ್ಯಾಸ ಆರಂಭಿಸಲಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ತಮ್ಮ ಫಾರ್ಮ್ ಕಂಡುಕೊಳ್ಳದಿದ್ದರೆ ಭಾರತದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications