
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಅದ್ಭುತ ಆಟವನ್ನು ಪ್ರದರ್ಶಿಸಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ನೀಡಿದ ಪ್ರದರ್ಶನ ಹಾಗೂ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ರನ್ ನಿಯಂತ್ರಣ ತಂಡದ ಕಾರಣದಿಂದಾಗಿ ಭಾರತ 8 ರನ್‌ಗಳ ಅಂತರದ ಗೆಲುವನ್ನು ಸಾಧಿಸಿತು. ಈ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
"ವಿಶೇಷವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಉಲ್ಲೇಖಿಸಲೇಬೇಕು. ತಮ್ಮ ಮೊದಲ ಪಂದ್ಯದಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ನಡೆಸಿದರು. ಇಶಾನ್ ರೀತಿಯಲ್ಲೇ ಅವರು ಆಡಿದರು. ಐಪಿಎಲ್‌ನಲ್ಲಿ ಆಡಿದ ಕಾರಣದಿಂದಾಗಿ ಅವರು ನಿರ್ಭೀತವಾಗಿ ಆಡಬಲ್ಲವರಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಈ ಸರಣಿಯ ನಂತರ ನಾವು ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಹೊಂದಿಲ್ಲ. ಹಾಗಾಗಿ ಆಟಗಾರರು ಸಾಕಷ್ಟು ಆತ್ಮವಿಶ್ವಾಸದಿಂದ ಇರುವುದನ್ನು ನಾನು ಬಯಸುತ್ತೇನೆ. ಬೌಲಿಂಗ್‌ನಲ್ಲಿ ನಾವು ತೀಕ್ಷ್ಣತೆಯನ್ನು ಹೊಂದಿದ್ದೇವೆ ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ನಾಲ್ಕನೇ ಪಂದ್ಯದ ಫೀಲ್ಡಿಂಗ್‌ನ ಕೊನೆಯ ಕ್ಷಣದಲ್ಲಿ ವಿರಾಟ್ ಕೊಹ್ಲಿ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಇದರ ಕಾರಣವನ್ನು ಕೊಹ್ಲಿ ತಿಳಿಸಿದ್ದಾರೆ. "ನಾನು ಚೆಂಡಿಗಾಗಿ ಓಡಿ ಅದನ್ನು ಎಸೆದಿದ್ದೆ, ಈ ಸಂದರ್ಭದಲ್ಲಿ ಸಣ್ಣ ನೋವು ಕಾಣಿಸಿಕೊಂಡಿತು. ಹಾಗಾಗಿ ಅದು ಉಲ್ಬಣವಾಗಲು ಅಥವಾ ಗಾಯವಾಗಲು ಕಾರಣವಾಗಬಾರದು ಎಂದಿ ನಿರ್ಧರಿಸಿದೆ. ಇನ್ನೆರಡು ದಿನಗಳಲ್ಲಿ ನಾವು ನಿರ್ನಾಯಕ ಪಂದ್ಯವನ್ನು ಆಡಲಿದ್ದೇವೆ. ಹಾಗಾಗಿ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡೆ" ಎಂದಿದ್ದಾರೆ ವಿರಾಟ್ ಕೊಹ್ಲಿ.
ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ 2-2 ಅಂತರದಿಂದ ಸಮಬಲ ಸಾಧಿಸಿದೆ. ಶನಿವಾರ ಈ ಸರಣಿಯ ನಿರ್ಣಾಯಕ ಪಂದ್ಯ ನಡೆಯಲಿದ್ದು ಗೆಲುವು ಸಾಧಿಸಿದ ತಂಡ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಹಾಗಾಗಿ ಮುಮದಿನ ಪಂದ್ಯ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.