
ಲಂಡನ್, ಸೆಪ್ಟೆಂಬರ್ 6: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ಪಂದ್ಯದಲ್ಲಿಯೂ ಭಾರತ ತನ್ನ ಪರಾಕ್ರಮವನ್ನು ಮುಂದುವರಿಸಿದೆ. ಹೀಗಾಗಿ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ಬಂದಿದೆ ವಿರಾಟ್ ಕೊಹ್ಲಿ ಬಳಗ. ಅಂತಿಮ ದಿನ ಟೀಮ್ ಇಂಡಿಯಾ ಗೆಲುವಿಗೆ ಇಂಗ್ಲೆಂಡ್ ತಂಡದ 10 ವಿಕೆಟ್‌ಗಳನ್ನು ತೆಗೆಯುವ ಸವಾಲು ಮುಂದಿತ್ತು. ಇದರಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಪಡೆ ಬಹುತೇಕ ಯಶಸ್ಸು ಸಾಧಿಸಿದ್ದು ಗೆಲುವಿನ ಸನಿಹಕ್ಕೆ ಬಂದಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ಪ್ರದರ್ಶನಕ್ಕೆ ಇಂಗ್ಲೆಂಡ್ ದಾಂಡಿಗರು ತತ್ತರಿಸಿದ್ದಾರೆ.
ನಾಲ್ಕನೇ ದಿನ ವಿಕೆಟ್ ಕಲೆದುಕೊಳ್ಳದೆ ಅರ್ಧ ಶತಕದ ಜೊತೆಯಾಟ ನೀಡಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದ ಇಂಗ್ಲೆಂಡ್ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ ಭರ್ತಿ 100 ರನ್‌ಗಳ ಜೊತೆಯಾಟ ನೀಡಿದ ಬಳಿಕ ಬೇರ್ಪಟ್ಟಿತು. ಈ ಮೂಲಕ ಇಂಗ್ಲೆಂಡ್ ತಂಡದ ಕುಸಿತಕ್ಕೆ ಚಾಲನೆ ದೊರೆಯಿತು. ಟೀಮ್ ಇಂಡಿಯಾದ ಬೌಲರ್‌ಗಳು ಇಂಗ್ಲೆಂಡ್ ದಾಂಡಿಗರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರುವ ಪ್ರಯತ್ನವನ್ನು ಪದೇ ಪದೇ ವಿಫಲಗೊಳಿಸುತ್ತಲೇ ಸಾಗಿದರು.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಎಸೆತದ ಎರಡು ಅದ್ಭುತ ಎಸೆತಗಳು ಇಂಗ್ಲೆಂಡ್‌ನ ಇಬ್ಬರು ಪ್ರಮುಖ ಆಟಗಾರರನ್ನು ಫೆವಿಲಿಯನ್‌ಗೆ ಅಟ್ಟಿತು. ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರರಾದ ಒಲ್ಲೀ ಪೋಪ್ ಹಾಗೂ ಜಾನಿ ಬೈರ್‌ಸ್ಟೋವ್ ಬೂಮ್ರಾ ಎಸೆದ ಬೆಂಕಿಯಂತಾ ಎಸೆತಗಳಿಗೆ ನಿರುತ್ತರರಾಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್‌ಗೆ ಸಾಗಿದರು.
ಭರ್ತಿ 50 ರನ್‌ಗಳಿಸಿದ ಆರಂಭಿಕ ಆಟಗಾರ ರೋರಿ ಬರ್ನ್ಸ್ ಔಟ್ ಆಗುವ ಮೂಲಕ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಂದ ಡೇವಿಡ್ ಮಲನ್ ಬೇಡದ ರನ್ ಕದಿಯುವ ಪ್ರಯತ್ನದಲ್ಲಿ ಔಟಾಗುವ ಮೂಲಕ ಫೆವಿಲಿಯನ್‌ಗೆ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಮತ್ತೊಂದು ಉತ್ತಮ ಜೊತೆಯಾಟದಲ್ಲಿ ಭಾಗಿಯಾಗುವ ಲಕ್ಷಣ ತೋರಿಸಿದ್ದರು ಆರಂಭಿಕ ಆಟಗಾರ ಹಮೀದ್ ಹಾಗೂ ನಾಯಕ ಜೋ ರೂಟ್. ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಹಮೀದ್ 63 ರನ್‌ಗಳಿಸಿ ಜಡೇಜಾ ಎಸೆತಕ್ಕೆ ಬೌಲ್ಡ್ ಆಗಿದ್ದರು.
ನಂತರ ಬೌಲಿಂಗ್ ದಾಳಿಗಿಳಿದ ಬೂಮ್ರಾ ಇಂಗ್ಲೆಂಡ್ ತಂಡದ ಇಬ್ಬರು ದಾಂಡಿಗರಿಗೆ ಫೆವಿಲಿಯನ್ ಹಾದಿ ತೋರಿಸಿದರು. ಇಂಗ್ಲೆಂಡ್ ಇನ್ನಿಂಗ್ಸ್‌ನ 65ನೇ ಓವರ್‌ನ 5ನೇ ಎಸೆತದಲ್ಲಿ ಒಲ್ಲಿ ಪೋಪ್ ಯಾವುದೇ ಉತ್ತರವನ್ನು ನೀಡಲು ಸಾಧ್ಯವಾಗದೇ ವಿಕೆಟ್ ಕಳೆದುಕೊಂಡಿದ್ದರು. ಈ ಮೂಲಕ ಇಂಗ್ಲೆಂಡ್ 146 ರನ್‌ಗಳಿಗೆ ತನ್ನ 4ನೇ ವಿಕೆಟ್ ಕಳೆದುಕೊಂಡಿತ್ತು. ಈ ವಿಕೆಟ್ ಪಡೆಯುವ ಮೂಲಕ ಬೂಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ವಿಕೆಟ್ ಪಡೆದ ಸಾಧನೆಯನ್ನು ಮಾಡಿದರು. ಭಾರತದ ಪರವಾಗಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಕೀರ್ತಿಗೆ ಬೂಮ್ರಾ ಪಾತ್ರರಾದರು. 24 ಟೆಸ್ಟ್ ಪಂದ್ಯಗಳಲ್ಲಿ ಬೂಮ್ರಾ ಶತಕದ ಸಾಧನೆ ಮಾಡಿದ್ದಾರೆ.
ಒಲ್ಲಿ ಪೋಪ್ ವಿಕೆಟ್ ಪಡೆದ ಬಳಿಕ ತನ್ನ ಮುಂದಿನ ಓವರ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ನೀಡಿದರು ಬೂಮ್ರಾ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್‌ಗೆ ಭಯಾನಕ ಯಾರ್ಕರ್ ಎಸೆದ ಬೂಮ್ರಾ ವಿಕೆಟ್ ಉರುಳಿಸಿದ್ದರು. ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗದ ಬೈರ್‌ಸ್ಟೋವ್ ಫೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಜಾನಿ ಬೈರ್‌ಸ್ಟೋವ್ ವಿಕೆಟ್ ಪಡೆದ ಎಸೆತದ ವಿಡಿಯೋ ಇಲ್ಲಿದೆ:
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 11, ಚೇತೇಶ್ವರ ಪೂಜಾರ 4, ಕೆಎಲ್ ರಾಹುಲ್ 17, ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್ 57, ಉಮೇಶ್ ಯಾದವ್ 10, ಮೊಹಮ್ಮದ್ ಸಿರಾಜ್ 1 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು.
ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಆಲಿ ಪೋಪ್ 81, ಜೋ ರೂಟ್ 21, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು.
ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 1, ಆಲಿ ರಾಬಿನ್ಸನ್ 3, ಕ್ರಿಸ್ ವೋಕ್ಸ್ 4, ಕ್ರೇಗ್ ಓವರ್‌ಟನ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಉಮೇಶ್ ಯಾದವ್ 3, ಜಸ್ಪ್ರೀತ್ ಬೂಮ್ರಾ 2, ಶಾರ್ದೂಲ್ ಠಾಕೂರ್ 1, ಮೊಹಮ್ಮದ್ ಸಿರಾಜ್ 1 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ಅಜಿಂಕ್ಯಾ ರಹಾನೆ 0 ರನ್‌ಗಳಿಸಿ ಔಟಾಗಿದ್ದಾರೆ. ರಿಷಭ್ ಪಂತ್ 50 ಹಾಗೂ ಶಾರ್ದೂಲ್ ಠಾಕೂರ್ 60 ರನ್‌ಗಳ ಕೊಡುಗೆಯನ್ನು ನೀಡುವ ಮೂಲಕ ಮತ್ತೊಂದು ಅದ್ಭುತ ಜೊತೆಯಾಟದ ಕಾಣಿಕೆ ನೀಡಿದರು. ನಂತರ ಉಮೇಶ್ ಯಾದವ್ 25 ರನ್ ಹಾಗೂ ಜಸ್ಪ್ರೀತ್ ಬೂಮ್ರಾ 24 ರನ್‌ಗಳಿ ಔಟಾದರು. ಮೊಹಮ್ಮದ್ ಸಿರಾಜ್ 3 ರನ್‌ಗಳಿಸಿ ಔಟಾಗದೆ ಉಳಿದರು
ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 50, ಹಸೀಬ್ ಹಮೀದ್ 63, ಡೇವಿಡ್ ಮಲನ್ 5, ಒಲಿ ಪೋಪ್ 2, ಜೋ ರೂಟ್ 36, ಜಾನಿ ಬೈರ್‌ಸ್ಟೋ 0, ಮೊಯೀನ್ ಅಲಿ 0, ಕ್ರಿಸ್ ವೋಕ್ಸ್ 18 ರನ್‌ಗಳಿಸಿದ್ದಾರೆ.
ಇತ್ತಂಡಗಳ ಆಡುವ ಬಳಗ
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜಾನಿ ಬೈರ್‌ಸ್ಟೊವ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.