ಭಾರತ-ನ್ಯೂಜಿಲೆಂಡ್ 1ನೇ ಟೆಸ್ಟ್ ಪಂದ್ಯ: ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 129/0, ಭಾರತ 345 ರನ್‌ಗಳಿಗೆ ಆಲೌಟ್

ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಎರಡನೇ ದಿನದಾಟದಂತ್ಯಕ್ಕೆ ಕಿವೀಸ್ ಪಡೆ ವಿಕೆಟ್ ನಷ್ಟವಿಲ್ಲದೆ 129 ರನ್ ಕಲೆಹಾಕಿದೆ. ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ 345ರನ್‌ಗಳಿಗೆ ಉತ್ತರವಾಗಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದ ನ್ಯೂಜಿಲೆಂಡ್ ಒಂದೂ ವಿಕೆಟ್ ಕಳೆದುಕೊಳ್ಳದೆ 129 ರನ್ ಗಳಿಸಿದೆ.
ನ್ಯೂಜಿಲೆಂಡ್ ಓಪನರ್ ಟಾಮ್ ಲಥಾಮ್ ಟೆಸ್ಟ್ ಕ್ರಿಕೆಟ್‌ನಲ್ಲಿ 21ನೇ ಅರ್ಧಶತಕ ದಾಖಲಿಸಿದ್ರು. ಅತ್ಯಂತ ತಾಳ್ಮೆಯಿಂದ ಟೀಂ ಇಂಡಿಯಾ ಬೌಲರ್‌ಗಳನ್ನ ಎದುರಿಸಿದ ಟಾಮ್ ಲಥಾಮ್ 165 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿದ್ರು. ಲಥಾಮ್ ಜೊತೆಗೆ ಸ್ವಲ್ಪ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ ವಿಲ್ ಯಂಗ್ ತಮ್ಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ರು.

ಟಾಮ್ ಲಥಾಮ್, ವಿಲ್ ಯಂಗ್ ಶತಕದ ಜೊತೆಯಾಟ
ಟೀಮ್ ಇಂಡಿಯಾ ಮೂವರು ಸ್ಪಿನ್ನರ್‌ಗಳನ್ನು ಕಾಡಿದ ವಿಲ್ ಯಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅರ್ಧಶತಕಗಳಿಸಿದ್ರು. 180 ಎಸೆತಗಳನ್ನ ಎದುರಿಸಿದ ವಿಲ್ ಯಂಗ್ ಅಜೇಯ 75 ರನ್ ಕಲೆಹಾಕುವ ಮೂಲಕ ಶತಕದ ಜೊತೆಯಾಟವಾಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 12 ಅಮೋಘ ಬೌಂಡರಿಗಳಿದ್ದವು. ಎರಡನೇ ದಿನದಾಟದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ನ್ಯೂಜಿಲೆಂಡ್ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ತಲುಪಿದೆ. ಭಾರತದ ಟಾರ್ಗೆಟ್ ಬೆನ್ನತ್ತಲು ಇನ್ನೂ 216 ರನ್‌ಗಳು ಬಾಕಿ ಉಳಿದಿವೆ.
ಭಾರತದ ಪರ ಇಬ್ಬರು ಬೌಲರ್ಸ್ ಮತ್ತು ಮೂವರು ಸ್ಪಿನ್ನರ್ಸ್ ಒಂದೂ ವಿಕೆಟ್ ಸಿಗದೆ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು. ಭಾರತದಲ್ಲಿ ನ್ಯೂಜಿಲೆಂಡ್ ತಂಡದ ಮೂರನೇ ಶ್ರೇಷ್ಠ ಆರಂಭಿಕ ಜೊತೆಯಾಟ ಇದಾಗಿದೆ.

345ರನ್‌ಗಳಿಗೆ ಆಲೌಟ್ ಆದ ಟೀಂ ಇಂಡಿಯಾ
ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 345 ರನ್‌ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕದ ನೆರವಿನ ಜೊತೆಗೆ ಆರ್. ಅಶ್ವಿನ್ ಆಲ್‌ರೌಂಡರ್ ಪರ್ಫಾಮೆನ್ಸ್‌ನಿಂದಾಗಿ ಭಾರತ ಮೊದಲ ಇನ್ನಿಂಗ್ಸ್ 345ರನ್‌ಗಳಿಗೆ ಸರ್ವಪತನಗೊಂಡಿತು.
ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 258 ರನ್ ದಾಖಲಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಮೂರನೇ ಓವರ್‌ನಲ್ಲೇ ಜಡೇಜಾ ವಿಕೆಟ್ ಕಳೆದುಕೊಂಡಿತು. ಒಟ್ಟು 12 ಎಸೆತಗಳನ್ನ ಎದುರಿಸಿದ ರವೀಂದ್ರ ಜಡೇಜಾ ಇಂದು ಒನ್ ರನ್ ಸೇರಿಸದೆ, ಟಿಮ್ ಸೌಥಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಈ ಮೂಲಕ ಜಡ್ಡು ಇನ್ನಿಂಗ್ಸ್ 50 ರನ್‌ಗೆ ಕೊನೆಗೊಂಡಿತು.

ರವೀಂದ್ರ ಜಡೇಜಾ ವಿಕೆಟ್ ಉರುಳಿದ ಬಳಿಕ ಭಾರತದ ಪತನ
ರವೀಂದ್ರ ಜಡೇಜಾ ವಿಕೆಟ್ ಪತನದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಾ ಕೂಡ ತಂಡಕ್ಕೆ ಆಧಾರವಾಗುವಲ್ಲಿ ವಿಫಲಗೊಂಡ್ರು ಕೇವಲ 1ರನ್‌ಗಳಿಸಿ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಟಾಮ್ ಬ್ಲಂಡೆಲ್‌ಗೆ ವಿಕೆಟ್ ಒಪ್ಪಿಸಿದ್ರು.
ಇದರ ನಡುವೆ ಟೀಂ ಇಂಡಿಯಾ ಪರ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ರು. ಮೊದಲ ದಿನದಾಟದಂತ್ಯಕ್ಕೆ 136 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿದ ಅಯ್ಯರ್ 157 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಟೀಂ ಇಂಡಿಯಾದ 16 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

105ರನ್‌ಗೆ ವಿಕೆಟ್ ಒಪ್ಪಿಸಿದ ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ಶತಕದ ಬಳಿಕ 105ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಟಿಮ್ ಸೌಥಿ ಬೌಲಿಂಗ್‌ನಲ್ಲಿ ವಿಲ್ ಯಂಗ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. 171 ಎಸೆತಗಳಲ್ಲಿ 105ರನ್ ಕಲೆಹಾಕಿದ ಅಯ್ಯರ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳಿವೆ.
ಇನ್ನು ಅಯ್ಯರ್ ಕಾನ್ಪುರದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. ಈ ಮೊದಲು ಕಾನ್ಪುರ ಪಿಚ್‌ನಲ್ಲಿ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಚೊಚ್ಚಲ ಶತಕ ದಾಖಲಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ 1969ರಲ್ಲಿ ಕಾನ್ಪುರದಲ್ಲಿ 137 ರನ್ ಕಲೆಹಾಕಿದ್ದರು.
ಅಯ್ಯರ್ ವಿಕೆಟ್ ಉರುಳಿದ ಮೊದಲ ಸೆಷನ್‌ನಲ್ಲೇ ಟೀಂ ಇಂಡಿಯಾ ಆಲೌಟ್ ಆಗುವುದನ್ನ ತಪ್ಪಿಸಿದ್ದು, ಆಲ್‌ರೌಂಡರ್ ಆರ್. ಅಶ್ವಿನ್. 56 ಎಸೆತಗಳಲ್ಲಿ 38ರನ್ ಕಲೆಹಾಕಿದ ಅಶ್ವಿನ್ ಟೀಂ ಇಂಡಿಯಾ 300ರ ಗಡಿದಾಟಲು ನೆರವಾದ್ರು. ಆದ್ರೆ ಇದರ ನಡುವೆ ಅಕ್ಷರ್ ಪಟೇಲ್ ಕೇವಲ 3ರನ್‌ಗೆ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ಇದು ಕಿವೀಸ್ ಅನುಭವಿ ಸೀಮರ್‌ನ ಇನ್ನಿಂಗ್ಸ್‌ನ ಐದನೇ ವಿಕೆಟ್ ಆಗಿದೆ.
ಕೊನೆಯಲ್ಲಿ ಉಮೇಶ್ ಯಾದವ್ ಅಜೇಯ 10ರನ್, ಇಶಾಂತ್ ಶರ್ಮಾ ಶೂನ್ಯಕ್ಕೆ ಅಜಾಜ್ ಪಟೇಲ್‌ಗೆ ಎಲ್‌ಬಿಡ್ಬ್ಯೂ ಬಲೆಗೆ ಬಿದ್ದ ತಕ್ಷಣ ಭಾರತದ ಮೊದಲ ಇನ್ನಿಂಗ್ಸ್‌ಗೆ ತೆರೆಬಿದ್ದಿತು. ಭಾರತ 345 ರನ್‌ಗಳಿಗೆ ಆಲೌಟ್ ಆಗಿದೆ.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 69 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್ 91 ರನ್‌ಗೆ 3 ವಿಕೆಟ್ ಪಡೆದ್ರು, ಅಜಾಜ್ ಪಟೇಲ್ 90 ರನ್ ನೀಡಿ ಕೊನೆಯಲ್ಲಿ 2 ವಿಕೆಟ್ ಗಳಿಸಿದರು. ಇಂದು ಟೀಂ ಇಂಡಿಯಾ ಬಹುಬೇಗ ಆಲೌಟ್ ಆಗಲು ಟಿಮ್ ಸೌಥಿ ಮಾರಕ ಬೌಲಿಂಗ್ ದಾಳಿಯೇ ಸಾಕ್ಷಿಯಾಗಿತ್ತು. ಇಂದು ಉರುಳಿದ ಆರು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನ ಸೌಥಿ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications