ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 345 ರನ್‌ಗಳಿಗೆ ಆಲೌಟ್

ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 345 ರನ್‌ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕದ ನೆರವಿನ ಜೊತೆಗೆ ಆರ್. ಅಶ್ವಿನ್ ಆಲ್‌ರೌಂಡರ್ ಪರ್ಫಾಮೆನ್ಸ್‌ನಿಂದಾಗಿ ಭಾರತ ಮೊದಲ ಇನ್ನಿಂಗ್ಸ್ 345ರನ್‌ಗಳಿಗೆ ಸರ್ವಪತನಗೊಂಡಿತು.
ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 258 ರನ್ ದಾಖಲಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಮೂರನೇ ಓವರ್‌ನಲ್ಲೇ ಜಡೇಜಾ ವಿಕೆಟ್ ಕಳೆದುಕೊಂಡಿತು. ಒಟ್ಟು 12 ಎಸೆತಗಳನ್ನ ಎದುರಿಸಿದ ರವೀಂದ್ರ ಜಡೇಜಾ ಇಂದು ಒನ್ ರನ್ ಸೇರಿಸದೆ, ಟಿಮ್ ಸೌಥಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಈ ಮೂಲಕ ಜಡ್ಡು ಇನ್ನಿಂಗ್ಸ್ 50 ರನ್‌ಗೆ ಕೊನೆಗೊಂಡಿತು.
ರವೀಂದ್ರ ಜಡೇಜಾ ವಿಕೆಟ್ ಪತನದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಾ ಕೂಡ ತಂಡಕ್ಕೆ ಆಧಾರವಾಗುವಲ್ಲಿ ವಿಫಲಗೊಂಡ್ರು ಕೇವಲ 1ರನ್‌ಗಳಿಸಿ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಟಾಮ್ ಬ್ಲಂಡೆಲ್‌ಗೆ ವಿಕೆಟ್ ಒಪ್ಪಿಸಿದ್ರು.
ಇದರ ನಡುವೆ ಟೀಂ ಇಂಡಿಯಾ ಪರ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ರು. ಮೊದಲ ದಿನದಾಟದಂತ್ಯಕ್ಕೆ 136 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿದ ಅಯ್ಯರ್ 157 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಟೀಂ ಇಂಡಿಯಾದ 16 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.
ಶ್ರೇಯಸ್ ಅಯ್ಯರ್ ಶತಕದ ಬಳಿಕ 105ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಟಿಮ್ ಸೌಥಿ ಬೌಲಿಂಗ್‌ನಲ್ಲಿ ವಿಲ್ ಯಂಗ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. 171 ಎಸೆತಗಳಲ್ಲಿ 105ರನ್ ಕಲೆಹಾಕಿದ ಅಯ್ಯರ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳಿವೆ.
ಇನ್ನು ಅಯ್ಯರ್ ಕಾನ್ಪುರದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ. ಈ ಮೊದಲು ಕಾನ್ಪುರ ಪಿಚ್‌ನಲ್ಲಿ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಚೊಚ್ಚಲ ಶತಕ ದಾಖಲಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ 1969ರಲ್ಲಿ ಕಾನ್ಪುರದಲ್ಲಿ 137 ರನ್ ಕಲೆಹಾಕಿದ್ದರು.
ಅಯ್ಯರ್ ವಿಕೆಟ್ ಉರುಳಿದ ಮೊದಲ ಸೆಷನ್‌ನಲ್ಲೇ ಟೀಂ ಇಂಡಿಯಾ ಆಲೌಟ್ ಆಗುವುದನ್ನ ತಪ್ಪಿಸಿದ್ದು, ಆಲ್‌ರೌಂಡರ್ ಆರ್. ಅಶ್ವಿನ್. 56 ಎಸೆತಗಳಲ್ಲಿ 38ರನ್ ಕಲೆಹಾಕಿದ ಅಶ್ವಿನ್ ಟೀಂ ಇಂಡಿಯಾ 300ರ ಗಡಿದಾಟಲು ನೆರವಾದ್ರು. ಆದ್ರೆ ಇದರ ನಡುವೆ ಅಕ್ಷರ್ ಪಟೇಲ್ ಕೇವಲ 3ರನ್‌ಗೆ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ಇದು ಕಿವೀಸ್ ಅನುಭವಿ ಸೀಮರ್‌ನ ಇನ್ನಿಂಗ್ಸ್‌ನ ಐದನೇ ವಿಕೆಟ್ ಆಗಿದೆ.
ಕೊನೆಯಲ್ಲಿ ಉಮೇಶ್ ಯಾದವ್ ಅಜೇಯ 10ರನ್, ಇಶಾಂತ್ ಶರ್ಮಾ ಶೂನ್ಯಕ್ಕೆ ಅಜಾಜ್ ಪಟೇಲ್‌ಗೆ ಎಲ್‌ಬಿಡ್ಬ್ಯೂ ಬಲೆಗೆ ಬಿದ್ದ ತಕ್ಷಣ ಭಾರತದ ಮೊದಲ ಇನ್ನಿಂಗ್ಸ್‌ಗೆ ತೆರೆಬಿದ್ದಿತು. ಭಾರತ 345 ರನ್‌ಗಳಿಗೆ ಆಲೌಟ್ ಆಗಿದೆ.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 69 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್ 91 ರನ್‌ಗೆ 3 ವಿಕೆಟ್ ಪಡೆದ್ರು, ಅಜಾಜ್ ಪಟೇಲ್ 90 ರನ್ ನೀಡಿ ಕೊನೆಯಲ್ಲಿ 2 ವಿಕೆಟ್ ಗಳಿಸಿದರು. ಇಂದು ಟೀಂ ಇಂಡಿಯಾ ಬಹುಬೇಗ ಆಲೌಟ್ ಆಗಲು ಟಿಮ್ ಸೌಥಿ ಮಾರಕ ಬೌಲಿಂಗ್ ದಾಳಿಯೇ ಸಾಕ್ಷಿಯಾಗಿತ್ತು. ಇಂದು ಉರುಳಿದ ಆರು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನ ಸೌಥಿ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications