ಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 372 ರನ್‌ಗಳ ಬೃಹತ್ ಅಂತರದಿಂದ ವಿರಾಟ್ ಕೊಹ್ಲಿ ಪಡೆ ಗೆದ್ದು ಬೀಗುವ ಮೂಲಕ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನದಲ್ಲಿಯೇ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ರನ್‌ಗಳ ಭಾರೀ ಅಂತರದಿಂದ ವಿಜಯ ಸಾಧಿಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ಕಳೆದುಕೊಂಡು ಉಳಿದ ಐದು ವಿಕೆಟ್‌ಗಳಲ್ಲಿ 400 ರನ್‌ಗಳಿಸುವ ಅಸಾಧ್ಯ ಸವಾಲನ್ನು ಮುಂದಿಟ್ಟುಕೊಂಡು ನ್ಯೂಜಿಲೆಂಡ್ ನಾಲ್ಕನೇ ದಿನದಾಟವನ್ನು ಆರಂಭಿಸಿತ್ತು. ಆದರೆ ನಾಲ್ಕನೇ ದಿನ ಜಯಂತ್ ಯಾದವ್ ಸ್ಪಿನ್ ಸುಳಿಗೆ ಸಿಲುಕಿದ ನ್ಯೂಜಿಲೆಂಡ್ ಪಡೆ ಭಾರತಕ್ಕೆ ಸುಲಭ ತುತ್ತಾಯಿತು. 28 ರನ್‌ಗಳ ಅಂತರದಲ್ಲಿ ಕೊನೆಯ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಭಾರತದ ವಿರುದ್ಧ ಭಾರೀ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಭಾರತ ತವರಿನಲ್ಲಿ ನಡೆದ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಒಂದೂ ಸೋಲು ಕಾಣದೆ ಗೆದ್ದು ಬೀಗಿದೆ.

ಮಿಂಚಿದ ಮಯಾಂಕ್ ಅಗರ್ವಾಲ್
ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮುಂಬೈ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 150 ರನ್‌ಗಳಿಸಿದ್ದ ಮಯಾಂಕ್ ಅಗರ್ವಾಲ್ ಸುದೀರ್ಘ ಕಾಲದಿಂದ ಕಾದಿದ್ದ ಶತಕವನ್ನು ಪೂರ್ಣಗೊಳಿಸಿದ್ದಾರೆ. ಮಯಾಂಕ್ ಸಾಧನೆಯಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಅದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈ ಫಾರ್ಮ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಭರ್ಜರಿ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಎರಡನೇ ಇನ್ನಿಂಗ್ಸ್‌ಬಲ್ಲಿ 63 ರನ್ ಬಾರಿಸಿ ಮಯಾಂಕ್ ವಿಕೆಟ್ ಕಳೆದುಕೊಂಡರು.

ದಾಖಲೆ ಬರೆದ ಭಾರತೀಯ ಸಂಜಾತ ಕಿವೀಸ್ ಬೌಲರ್
ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಜಾಜ್ ಪಟೇಲ್ ಭಾರತದ ಎಲ್ಲಾ ಹತ್ತೂ ವಿಕಟ್‌ಗಳನ್ನು ಒಬ್ಬರೆ ಪಡೆದು ದಾಖಲೆ ಬರೆದಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಕೇವಲ ಮೂರನೇ ಆಟಗಾರ ಎನಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈ ಉತ್ತಮ ಪ್ರದರ್ಶನ ಮುಂದುವರಿಸಿದ ಅಜಾಜ್ ಪಟೇಲ್ ನಾಲ್ಕು ವಿಕೆಟ್‌ಗಳನ್ನು ಕೆಡವಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ಮತ್ತೊಮ್ಮೆ ಅಡ್ಡಿಯಾದರು ಈ ಭಾರತೀಯ ಸಂಜಾತ ನ್ಯೂಜಿಲೆಂಡ್ ಆಟಗಾರ. ಒಟ್ಟಯ ಈ ಪಂದ್ಯದಲ್ಲಿ ಅಜಾಜ್ ಪಟೇಲ್ ಭಾರತದ 14 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಂಬರ್ 1 ಸ್ಥಾನಕ್ಕೇರಿದ ಭಾರತ
ಇನ್ನು ಟೆಸ್ಟ್ ಶ್ರೇಯಾಂಕದಲ್ಲಿ ಸುದೀರ್ಘ ಕಾಲದಿಂದ ನಂಬರ್ 1 ಸ್ಥಾನದಲ್ಲಿದ್ದ ಭಾರತ ಇತ್ತೀಚೆಗೆ ಅದನ್ನು ನ್ಯೂಜಿಲೆಂಡ್ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಇದೀಗ ಕಿವೀಸ್ ವಿರುದ್ಧದ ಸರಣಿಯಲ್ಲಿಯೇ ಗಲ್ಲುವ ಮೂಲಕ ಟೀಮ್ ಇಂಡಿಯಾ ಮತ್ತೊಮ್ಮೆ ನಂಬರ್ 1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್
ಬೆಂಚ್: ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications