ಕಾನ್ಪುರ ಟೆಸ್ಟ್: ನ್ಯೂಜಿಲೆಂಡ್‌ಗೆ ಕಂಟಕವಾಗಿ ಹಸನ್ ಅಲಿ, ಜೆಮಿಸನ್ ದಾಖಲೆ ಸರಿದೂಗಿಸಿದ ಅಕ್ಷರ್ ಪಟೇಲ್!

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಕನಸನ್ನು ನನಸು ಮಾಡಿಕೊಳ್ಳಲಾಗದೇ ಟೂರ್ನಿಯಿಂದ ಹೊರಬಂದ ನಂತರ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ವೈಟ್ ವಾಶ್ ಬಳಿದು ಸಾಧನೆ ಮಾಡಿತು. ಈಗ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ಆರಂಭವಾಗಿದ್ದು ಚೊಚ್ಚಲ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ.
ಈ ಟೆಸ್ಟ್ ಪಂದ್ಯದ 3 ದಿನಗಳ ಆಟ ಈಗಾಗಲೇ ಮುಗಿದಿದ್ದು ಅಜಿಂಕ್ಯ ರಹಾನೆ ನಾಯಕತ್ವದ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿದರು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್, ಶುಬ್ ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಉತ್ತಮ ಆಟದ ನೆರವಿನಿಂದ 345 ರನ್ ಕಲೆಹಾಕಿತು. ನಂತರ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಮತ್ತು ವಿಲ್ ಯಂಗ್ ಅತ್ಯುತ್ತಮ ಆರಂಭವನ್ನು ಮಾಡಿದರು. ದ್ವಿತೀಯ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಉತ್ತಮ ಹಂತದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ತೃತೀಯ ದಿನದಂದು ಕಂಟಕವಾಗಿ ಕಾಡಿದ್ದು ಭಾರತದ ಸ್ಪಿನ್ ಬೌಲರ್ ಅಕ್ಷರ್ ಪಟೇಲ್.
ಹೌದು, ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ತೃತೀಯ ದಿನದಾಟದಂದು ಅಕ್ಷರ್ ಪಟೇಲ್ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 6 ಮೇಡನ್ ಓವರ್ ಸಹಿತ 34 ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ 62 ರನ್ ಮಾತ್ರ ನೀಡಿದರು ಮತ್ತು 5 ವಿಕೆಟ್‍ಗಳನ್ನು ಪಡೆದು ಮಿಂಚಿದರು. ಹೀಗೆ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‍ಗಳ ಗೊಂಚಲನ್ನು ಪಡೆದಿರುವ ಅಕ್ಷರ್ ಪಟೇಲ್ ಈ ಕೆಳಕಂಡ ದಾಖಲೆಗಳನ್ನು ನಿರ್ಮಿಸಿದ್ದಾರೆ ಮತ್ತು ಸರಿದೂಗಿಸಿಕೊಂಡಿದ್ದಾರೆ.

ಈ ವರ್ಷ ಅತಿ ಹೆಚ್ಚು 5 ವಿಕೆಟ್ ಗೊಂಚಲು ಪಡೆದವರಲ್ಲಿ ಅಕ್ಷರ್ ಪಟೇಲ್ ಅಗ್ರಸ್ಥಾನ
2021ರಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಅತಿ ಹೆಚ್ಚು ಬಾರಿ 5 ವಿಕೆಟ್‍ಗಳ ಗೊಂಚಲನ್ನು ಪಡೆದಿರುವ ಬೌಲರ್‌ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ ಅಗ್ರಸ್ಥಾನವನ್ನು ಪಾಕಿಸ್ತಾನದ ಬೌಲರ್ ಹಸನ್ ಅಲಿ ಜೊತೆ ಹಂಚಿಕೊಂಡಿದ್ದಾರೆ. ಈ ದಾಖಲೆಯನ್ನು ಮೊದಲಿಗೆ ಪಾಕಿಸ್ತಾನದ ಬೌಲರ್ ಹಸನ್ ಅಲಿ ಮಾಡಿದ್ದರು. ಆದರೆ ಇದೀಗ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದಿರುವ ಅಕ್ಷರ್ ಪಟೇಲ್ ಹಸನ್ ಅಲಿ ಅವರ ಈ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಈ ವರ್ಷ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಅಕ್ಷರ್ ಪಟೇಲ್ 5 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದರೆ, ಪಾಕಿಸ್ತಾನದ ಹಸನ್ ಅಲಿ ಕೂಡ 5 ಬಾರಿ 5 ವಿಕೆಟ್ ಗೊಂಚಲು ಪಡೆದುಕೊಂಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 5 ವಿಕೆಟ್ ಗೊಂಚಲು ದಾಖಲೆಯಲ್ಲಿಯೂ ಅಗ್ರಸ್ಥಾನಕ್ಕೇರಿದ ಅಕ್ಷರ್ ಪಟೇಲ್
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ದ್ವಿತೀಯ ಆವೃತ್ತಿ ನಡೆಯುತ್ತಿದೆ. ಹೀಗೆ ಇಲ್ಲಿಯವರೆಗೂ ನಡೆದಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯ ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲುಗಳನ್ನು ಪಡೆದಿರುವ ಆಟಗಾರರ ಪಟ್ಟಿಯಲ್ಲಿ ಕೂಡ ಅಕ್ಷರ್ ಪಟೇಲ್ ಅಗ್ರಸ್ಥಾನಕ್ಕೇರಿದ್ದಾರೆ. ಅಕ್ಷರ್ ಪಟೇಲ್ 5 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದರೆ, ನ್ಯೂಜಿಲೆಂಡ್ ತಂಡದ ಕೈಲಿ ಜೆಮಿಸನ್ ಕೂಡ 5 ಬಾರಿ 5 ವಿಕೆಟ್ ಗೊಂಚಲನ್ನು ಪಡೆದಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಆಟಗಾರ ಎಂಬ ದಾಖಲೆಯನ್ನು ಅಕ್ಷರ್ ಪಟೇಲ್ ಕೈಲ್ ಜೆಮಿಸನ್ ಜೊತೆ ಹಂಚಿಕೊಂಡಿದ್ದಾರೆ.

ಕೇವಲ 4 ಟೆಸ್ಟ್ ಪಂದ್ಯವನ್ನಾಡಿ 5 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ ಅಕ್ಷರ್ ಪಟೇಲ್
ಹೌದು, ಅಕ್ಷರ್ ಪಟೇಲ್ ಇದುವರೆಗೂ ಆಡಿರುವ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳ ಸಂಖ್ಯೆ ಕೇವಲ 4 (ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನೂ ಸೇರಿ). ಹೀಗೆ ಅಕ್ಷರ್ ಪಟೇಲ್ ಆಡಿರುವ ಕೇವಲ 4 ಟೆಸ್ಟ್ ಪಂದ್ಯದಲ್ಲಿಯೇ 5 ಬಾರಿ 5 ವಿಕೆಟ್ ಗೊಂಚಲು ಪಡೆದ ದಾಖಲೆ ಬರೆದಿದ್ದಾರೆ. ಹೀಗೆ ಈ ದಾಖಲೆ ಬರೆದ ಮೊದಲನೆಯ ಭಾರತೀಯ ಎಂಬ ಖ್ಯಾತಿಗೂ ಸಹ ಅಕ್ಷರ್ ಪಟೇಲ್ ಪಾತ್ರರಾಗಿದ್ದಾರೆ. ಇದುವರೆಗೂ ಒಟ್ಟು 7 ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರುವ ಅಕ್ಷರ್ ಪಟೇಲ್ 32 ವಿಕೆಟ್ ಪಡೆದು ಹುಬ್ಬೇರುವಂತೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications