
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ತಕ್ಷಣವೇ ಭಾರತ ಪ್ರವಾಸವನ್ನು ಕೈಗೊಂಡು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟ್ವೆಂಟಿ ಸರಣಿಯನ್ನು ಆಡಿತು. ಹೀಗೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ನ್ಯೂಜಿಲೆಂಡ್ ಎಲ್ಲಾ 3 ಪಂದ್ಯಗಳಲ್ಲಿಯೂ ಹೀನಾಯವಾಗಿ ಸೋಲುವುದರ ಮೂಲಕ ಮುಖಭಂಗ ಅನುಭವಿಸಿತ್ತು. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಟಿಮ್ ಸೌಥಿ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸುವುದರ ಮೂಲಕ ವೈಟ್ ವಾಶ್ ಬಳಿದಿತ್ತು.
ಹೀಗೆ ಭಾರತ ವಿರುದ್ಧ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಹೀನಾಯವಾಗಿ ಸೋತು ವೈಟ್ ವಾಶ್ ಮುಖಭಂಗಕ್ಕೆ ಒಳಗಾದ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವುದರ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ಯೋಜನೆಯಲ್ಲಿತ್ತು. ಆದರೆ ಇತ್ತಂಡಗಳ ನಡುವೆ ಮೊದಲಿಗೆ ಕಾನ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹಿಡಿತ ಸಾಧಿಸಿದರೂ ಕೂಡ ಅಂತಿಮವಾಗಿ ನ್ಯೂಜಿಲೆಂಡ್ ತಂಡದ ಕೊನೆಯ ವಿಕೆಟ್ ಪಡೆಯಲಾಗದೇ ಟೀಮ್ ಇಂಡಿಯಾ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ನ್ಯೂಜಿಲೆಂಡ್ ತಂಡದ ಪರ ರಚಿನ್ ರವೀಂದ್ರ ಅಂತಿಮ ಹಂತದಲ್ಲಿ ಭಾರತೀಯ ಬೌಲರ್‌ಗಳು ಎಷ್ಟೇ ಕಠಿಣ ಪ್ರಯತ್ನ ನಡೆಸಿದರೂ ಕೂಡ ವಿಕೆಟ್ ಒಪ್ಪಿಸದೇ ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಿದರು.
ಹೀಗೆ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ನಂತರ ಇತ್ತಂಡಗಳ ಚಿತ್ತ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದತ್ತ ಇದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ ಡಿಸೆಂಬರ್ 7ರವರೆಗೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂದು ( ಡಿಸೆಂಬರ್ 3 ) ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ದಿನವಾಗಿದ್ದು, ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಿಲ್ಲ. ಹೌದು, ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಟಾಸ್ ಆಗಬೇಕಿದ್ದ ಸಮಯಕ್ಕೆ ಆಗಿಲ್ಲ. ಕಳೆದೆರಡು ದಿನಗಳಲ್ಲಿ ಮುಂಬೈ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಾಂಖೆಡೆ ಕ್ರೀಡಾಂಗಣ ತೇವಗೊಂಡಿರುವುದೇ ಟಾಸ್ ವಿಳಂಬವಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಟಾಸ್ ವಿಳಂಬವಾಗಿರುವುದರ ಕುರಿತು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಸಿಸಿಐ 9.30ಕ್ಕೆ ಪಿಚ್ ಪರಿಶೀಲನೆ ನಡೆಯಲಿದ್ದು ನಂತರ ಪಂದ್ಯದ ಕುರಿತ ಮುಂದಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದೆ.
ಇನ್ನು ಇದೇ ವೇಳೆ ಬಿಸಿಸಿಐ ಮಾಡಿರುವ ಈ ಟ್ವೀಟ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪ್ರತ್ಯುತ್ತರ ನೀಡುತ್ತಿದ್ದು, ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದ ಆಡಳಿತ ಮಂಡಳಿ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.
ಇಂದು ಮುಂಬೈ ನಗರದಲ್ಲಿ ಯಾವುದೇ ಮಳೆ ಇಲ್ಲದೇ ಇದ್ದರೂ ಸಹ ಪಿಚ್ ಸಂಪೂರ್ಣವಾಗಿ ಸಿದ್ಧಗೊಂಡಿಲ್ಲ ಎಂದರೆ ಅರ್ಥವೇನು. ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನವೊಂದರಲ್ಲಿ ಇದೆಂಥ ಕೆಟ್ಟ ವ್ಯವಸ್ಥೆ ಇದೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದ ಆಡಳಿತ ಮಂಡಳಿಯ ಅಸಮರ್ಥತೆ. ನಿನ್ನೆ ಮಧ್ಯಾಹ್ನದಿಂದ ಯಾವುದೇ ರೀತಿಯ ಮಳೆ ಸುರಿದಿಲ್ಲ ಆದರೂ ಕೂಡ ಇನ್ನೂ ಮೈದಾನ ತೇವಾಂಶದಿಂದ ಕೂಡಿದೆ ಹೀಗಾಗಿ ಟಾಸ್ ವಿಳಂಬವಾಗುತ್ತಿದೆ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಮತ್ತೋರ್ವ ಕ್ರಿಕೆಟ್ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ಮತ್ತೋರ್ವ ಕ್ರಿಕೆಟ್ ಅಭಿಮಾನಿ ಈ ಕುರಿತು ಕಾಮೆಂಟ್ ಮಾಡಿದ್ದು, ಮುಂಬೈ ನಗರದಲ್ಲಿ ಸದ್ಯ ಮೋಡ ಕವಿದ ವಾತಾವರಣವಿದೆ. ಹೀಗಾಗಿ ಊಟಕ್ಕೂ ಮುನ್ನ ಪಂದ್ಯ ಆರಂಭವಾದರೆ ಅದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಕಳೆದೆರಡು ದಿನಗಳಲ್ಲಿ ಮಳೆ ಸುರಿದಿರುವುದರಿಂದ ಊಟಕ್ಕೂ ಮುನ್ನ ಪಂದ್ಯ ಆರಂಭವಾಗುವುದು ಅನುಮಾನ ಎಂದು ಬರೆದುಕೊಂಡಿದ್ದಾರೆ.