
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಲಾಗದೆ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಗೂ ಮುನ್ನ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹೀಗೆ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತ ನ್ಯೂಜಿಲೆಂಡ್ ಸದ್ಯ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ.
ಟಿ ಟ್ವೆಂಟಿ ಸರಣಿಯಲ್ಲಿ ಸೋತು ಅನುಭವಿಸಿರುವ ಮುಖಭಂಗದ ಪ್ರತೀಕಾರವನ್ನು ಟೆಸ್ಟ್ ಸರಣಿಯಲ್ಲಿ ಗೆಲ್ಲುವುದರ ಮೂಲಕ ತೀರಿಸಿಕೊಳ್ಳುವ ಹಂಬಲದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಮೂರನೇ ದಿನದಾಟದಂದು ಬೌಲರ್ ಅಕ್ಷರ್ ಪಟೇಲ್ ತಣ್ಣೀರು ಎರಚಿದ್ದಾರೆ. ಹೌದು, ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ತೃತೀಯ ದಿನದಾಟದಂದು ಅಕ್ಷರ್ ಪಟೇಲ್ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 6 ಮೇಡನ್ ಓವರ್ ಸಹಿತ 34 ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ 62 ರನ್ ಮಾತ್ರ ನೀಡಿದರು ಮತ್ತು 5 ವಿಕೆಟ್‍ಗಳನ್ನು ಪಡೆದು ಮಿಂಚಿದರು.
ಇನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್, ಶುಬ್ ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಉತ್ತಮ ಆಟದ ನೆರವಿನಿಂದ 345 ರನ್ ಕಲೆಹಾಕಿತು. ನಂತರ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಮತ್ತು ವಿಲ್ ಯಂಗ್ ಅತ್ಯುತ್ತಮ ಆರಂಭವನ್ನು ಮಾಡಿದರು. ಹೀಗೆ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರರಾದ ಈ ಇಬ್ಬರೂ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ ನೆಲಕಚ್ಚಿ ನಿಂತರು. ನಂತರ ಮೂರನೇ ದಿನದಾಟದ ಆರಂಭದಲ್ಲಿಯೂ ಕೂಡ ಈ ಇಬ್ಬರು ಮಿಂಚಿದರು.
ಆದರೆ ಈ ಇಬ್ಬರ ಆಟ ಮೂರನೇ ದಿನದಾಟದಂದು ಹೆಚ್ಚು ಹೊತ್ತು ನಡೆಯಲಿಲ್ಲ. 67ನೇ ಓವರ್‌ನ ಮೊದಲನೆ ಎಸೆತವನ್ನು ರವಿಚಂದ್ರನ್ ಅಶ್ವಿನ್ ವಿಲ್ ಯಂಗ್ ಅವರಿಗೆ ಹಾಕಿದ್ದರು. ಈ ಎಸೆತಕ್ಕೆ ಹೊಡೆತ ಬಾರಿಸಲು ಹೋದ ವಿಲ್ ಯಂಗ್ ವಿಫಲವಾಗಿ ಚೆಂಡು ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಶ್ರೀಕರ್ ಭರತ್ ಕೈಸೇರಿತ್ತು. ಹೌದು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ವೃದ್ಧಿಮಾನ್ ಸಹಾ ಬದಲು ಶ್ರೀಕರ್ ಭರತ್ ಕೀಪರ್ ಕೈಗವಸು ತೊಟ್ಟು ಕಣಕ್ಕಿಳಿದಿದ್ದರು. ತೃತೀಯ ದಿನದಾಟದ ಆರಂಭಕ್ಕೂ ಮುನ್ನ ವೃದ್ಧಿಮಾನ್ ಸಹಾ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಕಾರಣದಿಂದಾಗಿ ಶ್ರೀಕರ್ ಭರತ್ ಕಣಕ್ಕಿಳಿಯಬೇಕಾಗಿ ಬಂತು.
ಹೀಗೆ ಕಣಕ್ಕಿಳಿದ ಶ್ರೀಕರ್ ಭರತ್ ಮೊದಲಿಗೆ ವಿಲ್ ಯಂಗ್ ಅವರ ಕ್ಯಾಚ್ ಪಡೆದರು, ನಂತರ ಅಕ್ಷರ್ ಪಟೇಲ್ ಎಸೆತದಲ್ಲಿ ರಾಸ್ ಟೇಲರ್ ಅವರ ಕ್ಯಾಚ್‌ನ್ನೂ ಕೂಡ ಕಬಳಿಸಿದರು. ಹೀಗೆ ವಿಲ್ ಯಂಗ್ ಮತ್ತು ರಾಸ್ ಟೇಲರ್ ಅವರ ಕ್ಯಾಚ್‌ಗಳನ್ನು ಪಡೆದ ಕೆ ಎಸ್ ಭರತ್ ನ್ಯೂಜಿಲೆಂಡ್ ತಂಡದ ಮತ್ತೋರ್ವ ಆಟಗಾರ ಟಾಮ್ ಲಾಥಮ್ ಅವರನ್ನು ಸ್ಟಂಪ್ ಔಟ್ ಮಾಡಿದರು. ಹೌದು, 103ನೇ ಓವರ್‌ನಲ್ಲಿ ಬೌಲರ್ ಅಕ್ಷರ್ ಪಟೇಲ್ ಎಸೆದ ಮೊದಲ ಎಸೆತವನ್ನು ಟಾಮ್ ಲಾಥಮ್ ಬಾರಿಸುವಲ್ಲಿ ವಿಫಲರಾದರು. ಅದೊಂದು ಕ್ಲಿಷ್ಟಕರವಾದ ಎಸೆತವಾಗಿದ್ದ ಕಾರಣ ಟಾಮ್ ಲಾಥಮ್ ಅವರ ಹೊಡೆತಕ್ಕೆ ಸಿಕ್ಕದ ಆ ಚೆಂಡನ್ನು ಮಿಂಚಿನಂತೆ ಹಿಡಿದ ವಿಕೆಟ್ ಕೀಪರ್ ಕೆ ಎಸ್ ಭರತ್ ಕ್ಷಣಾರ್ಧದಲ್ಲಿ ವಿಕೆಟ್‍ಗೆ ತಾಗಿಸಿ ಸ್ಟಂಪ್ ಔಟ್ ಮಾಡಿದರು. ಈ ಮೂಲಕ ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದು ಭಾರತಕ್ಕೆ ಕಂಟಕವಾಗಿ ಪರಿಣಮಿಸಿದ್ದ ವಿಲ್ ಯಂಗ್ ಮತ್ತು ಟಾಮ್ ಲಾಥಮ್ ಇಬ್ಬರೂ ಪೆವಿಲಿಯನ್ ಸೇರಲು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದ ಕೆ ಎಸ್ ಭರತ್ ಕಾರಣಕರ್ತರಾದರು. ಹೀಗೆ ತಂಡದ ಅಧಿಕೃತ ಆಡುವ ಬಳಗದಲ್ಲಿ ಅವಕಾಶ ಸಿಗದೇ ಇದ್ದರೂ ಕೂಡ ಹೆಚ್ಚುವರಿ ಆಟಗಾರನಾಗಿ ಕಣಕ್ಕಿಳಿದು ಕೆ ಎಸ್ ಭರತ್ ನೀಡಿರುವ ಈ ಅತ್ಯುತ್ತಮ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆ ಎಸ್ ಭರತ್ ಪ್ರತಿನಿಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತನ ಇಂದಿನ ಪ್ರದರ್ಶನವನ್ನು ಹೊಗಳಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.