ದುಬೈ: ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಕ್ಷಣ ಸಮೀಪಿಸಿದೆ. ವಿಶ್ವದ ಬಿಗ್ ರೈವಲ್‌ರಿಗಳಲ್ಲಿ ಒಂದಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆರು ತಿಂಗಳ ಬಳಿಕ ಮತ್ತೆ ಮೈದಾನದಲ್ಲಿ ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸೂಪರ್ ಫೋರ್ ಹಂತಕ್ಕೆ ಹತ್ತಿರವಾಗುವ ಕನಸು ಎರಡೂ ತಂಡಗಳದ್ದಾಗಿದೆ. ಈಗಾಗಲೇ ಎರಡೂ ತಂಡಗಳು ತಾವಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿವೆ. ಹೀಗಾಗಿ ಈ ಪಂದ್ಯ ರೋಚಕತೆ ಹೆಚ್ಚಿಸಿದೆ.
ಯುಎಇ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 9 ವಿಕೆಟ್ ಜಯ ಸಾಧಿಸಿರುವ ಟೀಮ್ ಇಂಡಿಯಾ ಆತ್ಮ ವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಇನ್ನು ಸೂರ್ಯಕುಮಾರ್ ಯಾದವ್ ಅವರ ಮುಂದಾಳತ್ವದಲ್ಲಿ ಭಾರತ ತಂಡದ ಇದೇ ಮೊದಲ ಬಾರಿಗೆ ಪಾಕ್ ತಂಡವನ್ನು ಎದುರಿಸಲಿದೆ. ಸ್ಟಾರ್ ಆಟಗಾರರಿಂದ ತುಂಬಿಕೊಂಡಿರುವ ಭಾರತ, ಪಾಕ್ ತಂಡವನ್ನು ಮಣಿಸಿ ಮುನ್ನಡೆಗೆ ಹತ್ತಿರವಾಗುವ ಕನಸು ಕಾಣುತ್ತಿದೆ. ಈಗಾಗಲೇ ಉಭಯ ತಂಡಗಳು ಒಟ್ಟು 13 ಬಾರಿ ಅಂಗಳದಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 10, ಪಾಕಿಸ್ತಾನ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಟೀಮ್ ಇಂಡಿಯಾ ಈ ಬಾರಿ ಬಲಾಢ್ಯವಾಗಿದೆ. ಎಂಟನೇ ಕ್ರಮಾಂಕದ ವರೆಗೆ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಯುವ ಆಟಗಾರರಿಂದ ಕುಡಿರುವ ಸೂರ್ಯ ಪಡೆ, ಪಾಕ್ ತಂಡವನ್ನು ಕಟ್ಟಿ ಹಾಕುವ ಕನಸು ಹೊಂದಿದೆ. ಯುಎಇ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ತಂಡಕ್ಕೆ ಬಲ ತುಂಬವ ಆಟಗಾರರು. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದು, ಮಧ್ಯಮ ಕ್ರಮಾಂಕಕ್ಕೆ ಆನೆ ಬಲ ತುಂಬ ಬಲ್ಲರು.
ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ ನುರಿತ ಆಲ್‌ರೌಂಡರ್‌ಗಳು ಇದ್ದಾರೆ. ಇವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬಲ್ಲರು. ಇನ್ನು ಶಿವಂ ದುಬೆ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದರಿಂದ ಭರವಸೆ ಮೂಡಿಸಿದ್ದಾರೆ. ಇನ್ನು ನುರಿತ ವೇಗದ ಬೌಲರ್ ರೂಪದಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಸ್ಪಿನ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಲು ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಇದ್ದಾರೆ. ಕುಲ್‌ದೀಪ್ ಕಳೆದ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಹೀಗಾಗಿ ಇವರ ಮೇಲೆ ಭರವಸೆ ಮೂಡಿದೆ.

ಸಂಭಾವ್ಯ ಭಾರತ ತಂಡ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್‌ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ ಸಹ ಓಮನ್ ವಿರುದ್ಧ ತಾನಾಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಕೊಂಚ ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಮೊಹಮ್ಮದ್ ಹ್ಯಾರೀಸ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಇನ್ನು ಭರವಸೆಯ ಆಲ್‌ರೌಂಡರ್ ಮೊಹಮ್ಮದ್ ನವಾಜ್ ಅವರಿಗೂ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.
ಸಂಭಾವ್ಯ ಪಾಕಿಸ್ತಾನ ತಂಡ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್, ಫಖರ್ ಜಮಾನ್, ಸಲ್ಮಾನ್ ಅಲಿ ಅಘಾ, ಹಸನ್ ನವಾಜ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಅಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಸುಫಿಯಾನ್ ಮುಖೀಮ್.