ಇಶಾನ್ ಆಡೋದು ನಿಶ್ಚಿತ.. ರಾಹುಲ್ ಸ್ಥಾನ ಬಹುತೇಕ ಖಚಿತ.. ಹಾಗಾದ್ರೆ ಯಾರು ಹೊರಗೆ ಬೀಳೋ ದುರದೃಷ್ಟವಂತ?
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಪಂದ್ಯ ಭಾನುವಾರ ನಡೆಯಲಿದ್ದು ಎಲ್ಲರ ಗಮನ ಆ ಪಂದ್ಯದ ಮೇಲೆ ನೆಟ್ಟಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಗ್ರೂಪ್ ಹಂತದ ಪಂದ್ಯ ಮಳೆಗೆ ಆಹುತಿಯಾದ ನಂತರ ಮತ್ತೊಮ್ಮೆ ಟೂರ್ನಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದ ವಿಚವಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮ್ಯಾನೇಜ್‌ಮೆಂಟ್ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಗ್ರೂಪ್ ಹಂತದಲ್ಲಿ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದ ಕೆಎಲ್ ರಾಹುಲ್ ಸೂಪರ್ 4 ಹಂತದಲ್ಲಿ ಆಡಲು ಸಜ್ಜಾಗಿದ್ದಾರೆ. ಈಗಾಗಲೇ ತಂಡವನ್ನು ಸೇರಿಕೊಂಡಿರುವ ರಾಹುಲ್ ಅಭ್ಯಾಸವನ್ನು ಕೂಡ ನಡೆಸಿದ್ದಾರೆ. ಆದರೆ ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳಬೇಕಿದ್ದರೆ ಹೊರಗುಳಿಯಲಿರುವ ಆಟಗಾರ ಯಾರು ಎನ್ನುವುದು ಈಗಿನ ಪ್ರಶ್ನೆಯಾಗಿದೆ.

ಕೆಎಲ್ ರಾಹುಲ್ ಬದಲಿಗೆ ತಂಡದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ಇಶಾನ್ ಕಿಶನ್ ಟೀಮ್ ಇಂಡಿಯಾದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಅರ್ಧ ಶತಕ ಸಿಡಿಸಿರುವ ಇಶಾನ್ ಪಾಕ್ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ ತಂಡವನ್ನು ಭಾರೀ ಸಂಕಷ್ಟದಿಂದ ಕಾಪಾಡಿದ್ದರು. ಹಾಗಾಗಿ ಅವರನ್ನು ಹೊರಗಿಡುವುದು ಅಸಾಧ್ಯ. ಹೀಗಾಗಿ ಕೆಎಲ್ ರಾಹುಲ್ ಸ್ಥಾನಕ್ಕೆ ಕೂಡ ಈಗ ಕುತ್ತುಂಟಾಗಿದೆ.
ಕೆಎಲ್ ರಾಹುಲ್‌ಗೆ ಸ್ಥಾನ ಬಿಟ್ಟುಕೊಡಲಿದ್ದಾರಾ ಐಯ್ಯರ್?
ಇಶಾನ್ ಕಿಶನ್ ಅವರನ್ನು ಹೊರಗಿಡುವುದು ಅಸಾಧ್ಯವಾಗಿರುವ ಕಾರಣ ಕೆಎಲ್ ರಾಹುಲ್‌ಗೆ ತಂಡದಲ್ಲಿ ಸ್ಥಾನವನ್ನು ನೀಡಬೇಕಿದ್ದರೆ ಉಳಿದಿರುವ ಒಂದು ಆಯ್ಕೆಯೆಂದರೆ ಶ್ರೇಯಸ್ ಐಯ್ಯರ್ ಆಡುತ್ತಿರುವ ನಾಲ್ಕನೇ ಕ್ರಮಾಂಕ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಶ್ರೇಯಸ್ ಐಯ್ಯರ್ ತಮ್ಮ ಸ್ಥಾನವನ್ನು ಕೆಎಲ್ ರಾಹುಲ್‌ಗೆ ಬಿಟ್ಟುಕೊಡಬೇಕಾಗುವುದು ಬಹುತೇಕ ನಿಶ್ಚಿತ ಎಂದು ವರದಿಯಾಗಿದೆ.
ಬೂಮ್ರಾ ಕಮ್‌ಬ್ಯಾಕ್
ಇನ್ನು ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ತಮ್ಮ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಬೂಮ್ರಾ ನೇಪಾಳ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈಗೆ ವಾಪಸಾಗಿದ್ದರು. ಹೀಗಾಗಿ ನೇಪಾಳ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಾಗಿರಲಿಲ್ಲ. ಇದೀಗ ಬೂಮ್ರಾ ತಂಡವನ್ನು ಸೇರಿಕೊಂಡಿದ್ದಾರೆ.
ಉಳಿದಂತೆ ಟೀಮ್ ಇಂಡಿಯಾದಲ್ಲಿ ಇಲ್ಲ ಬದಲಾವಣೆ
ಇನ್ನು ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಭಾರತದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಬದಲಿಗೆ ಆಡುವ ಸಾಧ್ಯತೆ ಹೆಚ್ಚಿದೆ. ಇನ್ನು ನೇಪಾಳ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಬದಲಿಗೆ ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಬೂಮ್ರಾ ಕೂಡ ಈ ಪಂದ್ಯದಲ್ಲಿ ಆಡುವ ಬಳಗವನ್ನು ಸೇರಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾ ಸಂಭಾವ್ಯ XI
ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications