ಭಾನುವಾರ, ಸೆಪ್ಟೆಂಬರ್ 10ರಂದು ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಿದವು.
ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು (ಸೋಮವಾರ) ಉಳಿದ ಆಟ ಮುಂದುವರೆಯಲಿದೆ. ಆದರೆ, ಪ್ರಸ್ತುತ ಕೊಲಂಬೊದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ವರದಿಯಾಗಿದೆ.

ಬೆಳಿಗ್ಗೆಯಿಂದ ಬಿಟ್ಟುಬಿಟ್ಟು ಮಳೆ ಬರುತ್ತಿರುವ ಕಾರಣ ಈಗಾಗಲೇ ಪೂರ್ತಿ ಮೈದಾನವನ್ನು ಕವರ್‌ಗಳಿಂದ ಮುಚ್ಚಲಾಗಿದೆ. ಹೀಗಾಗಿ, ಪಂದ್ಯದ ಪುನರಾರಂಭವು ಕೆಲಹೊತ್ತು ವಿಳಂಬವಾಗಲಿದೆ.
ಭಾನುವಾರ ಮತ್ತು ಸೋಮವಾರ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿರುವ ಕಾರಣ ಪಂದ್ಯದ ಆರಂಭ ತಡವಾಗಲಿದ್ದು, ಆಶಾದಾಯಕವಾಗಿ, ಮಳೆ ನಿಂತರೆ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಪಿಚ್ ಅನ್ನು ಸಿದ್ಧಪಡಿಸಲು ಮೈದಾನದ ಸಿಬ್ಬಂದಿ ತಮ್ಮ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ.
ಕೊಲಂಬೊದಲ್ಲಿ ಮಳೆಯ ಕಣ್ಣಮುಚ್ಚಾಲೆ ಆಟ ಹೇಗಿದೆ ನೋಡಿ:
ಮಧ್ಯಾಹ್ನ 2.35ಕ್ಕೆ - ಮಳೆ ನಿಂತಿತು
ಮಧ್ಯಾಹ್ನ 2.43ಕ್ಕೆ - ಕವರ್‌ಗಳನ್ನು ತೆಗೆಯಲಾಗುತ್ತದೆ
ಮಧ್ಯಾಹ್ನ 2.54ಕ್ಕೆ - ಮತ್ತೆ ಮಳೆ ಸುರಿಯಲಾರಂಭಿಸಿತು
ಮಧ್ಯಾಹ್ನ 3.03ಕ್ಕೆ - ಮತ್ತೆ ಮಳೆ ನಿಲ್ಲುತ್ತದೆ
ಮಧ್ಯಾಹ್ನ 3.20ಕ್ಕೆ - ಮತ್ತೆ ಮಳೆ ಆರಂಭ
ಭಾನುವಾರ ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ಗಳಿಂದ ಭಾರತದ ಇನ್ನಿಂಗ್ಸ್ ಮುಂದುವರೆಯಲಿದ್ದು, ಆಟ ಆರಂಭವಾದರೆ ಬೃಹತ್ ಮೊತ್ತ ದಾಖಲಿಸಲು ಭಾರತೀಯ ಬ್ಯಾಟರ್‌ಗಳು ಪ್ರಯತ್ನಿಸಲಿದ್ದಾರೆ.
ಮತ್ತೊಂದಡೆ, ಪಾಕಿಸ್ತಾನದ ಬೌಲರ್‌ಗಳು ಪಂದ್ಯ ಆರಂಭವಾಗುತ್ತಿದ್ದಂತೆಯೇ ಭಾರತದ ವಿಕೆಟ್‌ಗಳನ್ನು ಪಡೆಯಲು ಎದುರು ನೋಡುತ್ತಾರೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಬ್ಯಾಟರ್‌ಗಳಾದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಜೋಡಿ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಒದಗಿಸಿದರು.
ಮೊದಲ ವಿಕೆಟ್ ಜೊತೆಯಾಟದ ಸಮಯದಲ್ಲಿ ಭಾರತದ ಈ ಆರಂಭಿಕ ಜೋಡಿ ವೈಯಕ್ತಿಕ ಅರ್ಧಶತಕ ಗಳಿಸಿದರು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 50ನೇ ಅರ್ಧಶತಕ ಸಿಡಿಸಿದರೆ, ಯುವ ಬ್ಯಾಟರ್ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 8ನೇ ಅರ್ಧಶತಕ ಬಾರಿಸಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ವಿರುದ್ಧ ಮೂರು ಸಿಕ್ಸರ್ ಬಾರಿಸಿ ಪ್ರಾಬಲ್ಯ ಸಾಧಿಸಿದರೆ, ಶಾಹೀನ್ ಅಫ್ರಿದಿ ಅವರ ಮೊದಲ ಮೂರು ಓವರ್‌ಗಳಲ್ಲಿ ಶುಭ್ಮನ್ ಗಿಲ್ ಆರು ಬೌಂಡರಿಗಳನ್ನು ದಾಖಲಿಸಿದರು.
ಅಂತಿಮವಾಗಿ, 17ನೇ ಓವರ್‌ನಲ್ಲಿ ಶಾದಾಬ್ ಖಾನ್ ಅವರ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಅವರ ಔಟಾಗುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ನೀಡಿದರು. ಇನ್ನು ಶಾಹೀನ್ ಅಫ್ರಿದಿ ನಂತರದ ಓವರ್‌ನಲ್ಲಿ ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿ ತಂಡಕ್ಕೆ ಎರಡನೇ ವಿಕೆಟ್ ತಂದುಕೊಟ್ಟರು.