India vs Pakistan: ಪಾಕಿಸ್ತಾನ ತಂಡದ ದೊಡ್ಡ ದೌರ್ಬಲ್ಯವನ್ನು ಬೊಟ್ಟು ಮಾಡಿದ ಮಾಜಿ ಕ್ರಿಕೆಟಿಗ

ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿ ಈಗ ಎಲ್ಲರ ಕುತೂಹಲದ ಕೇಂದ್ರವಾಗಿದೆ. ಮುಂದಿನ ಭಾನುವಾರ ನಡೆಯಲಿರುವ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ ವಿಶ್ವಕಪ್‌ನಲ್ಲಿ ಭಾರತಕ್ಕೆ ಪಾಕಿಸ್ತಾನ ಸೋಲುಣಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಯಾವ ರೀತಿಯ ಪ್ರದರ್ಶನಗಳು ಎರಡೂ ತಂಡಗಳು ನೀಡಬಹುದು ಎಂಬುದು ಎಲ್ಲರ ಕುತೂಹಲ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್ ಪಾಕಿಸ್ತಾನ ತಂಡದ ಬಗ್ಗೆ ಕುತೂಹಲಕಾರಿ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ.
ಆರು ತಂಡಗಳು ಭಾಗವಹಿಸುತ್ತಿರುವ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟ್ರೋಫಿ ಗೆಲ್ಲುವ ನೆಚ್ಚಿನ ಎರಡು ತಂಡಗಳಾಗಿದೆ. ಆದರೆ ಈ ಪೈಕಿ ಪಾಕಿಸ್ತಾನ ತಂಡ ಒಂದು ಪ್ರಮುಖವಾದ ದೌರ್ಬಲ್ಯವನ್ನು ಹೊಂದಿದೆ ಎಂದಿದ್ದಾರೆ ಕಿವೀಸ್ ಮಾಜಿ ಕ್ರಿಕೆಟಿಗ. ಇಡೀ ಪಾಕಿಸ್ತಾನ ತಂಡ ಇಬ್ಬರು ಆಟಗಾರರನ್ನು ಅತಿಯಾಗಿ ನೆಚ್ಚಿಕೊಂಡಿದೆ ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.

ಬಾಬರ್, ರಿಜ್ವಾನ್ ಮೇಲೆ ಅವಲಂಬಿತವಾಗಿದೆ ಪಾಕ್
ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಮುಖ ಆಟಗಾರರಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅವರನ್ನು ಅತಿಯಾಗಿ ನೆಚ್ಚಿಕೊಂಡಿದೆ. ಭಾರತ ಈ ಆರಂಭಿಕ ಜೋಡಿಯನ್ನು ಶೀಘ್ರವಾಗಿ ಬೇರ್ಪಡಿಸಿದರೆ ಅದು ಗೆಲುವಿಗೆ ಪ್ರಮುಖ ಕಾರಣವಾಗಲಿದೆ ಎಂಬ ಅಭಿಪ್ರಾಯವನ್ನು ಸ್ಕಾಟ್ ಸ್ಟೈರಿಸ್ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಈ ಇಬ್ಬರು ಆಟಗಾರರು ಸೇರಿಕೊಂಡು ಭಾರತಕ್ಕೆ 10 ವಿಕೆಟ್‌ಗಳ ಅಂತರದ ಸೋಲುಣಿಸಿದ್ದರು. ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಅನುಭವಿಸಿದ ಮೊದಲ ಸೋಲು ಇದಾಗಿದೆ.

ಪ್ರಮುಖ ಬೌಲಿಂಗ್ ಅಸ್ತ್ರವನ್ನು ಕಳೆದುಕೊಂಡ ಪಾಕಿಸ್ತಾನ
ಇನ್ನು ಈ ಬಾರಿಯ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ದೊಡ್ಡ ಬಲವಾಗಬೇಕಿದ್ದ ಯುವ ವೇಗಿ ಶಾಹೀನ್ ಅಫ್ರಿದಿ ಟೂರ್ನಿಗೂ ಮುನ್ನವೇ ಗಾಯಗೊಂಡಿದ್ದಾರೆ. ಹೀಗಾಗಿ ಏಷ್ಯಾ ಕಪ್ ಟೂರ್ನಿಯಿಂದ ಅವರು ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ಅಗ್ರ ಕ್ರಮಾಂಕವನ್ನು ಶಾಹೀನ್ ಅಫ್ರಿದಿ ಶೀಫ್ರವಾಗಿ ಫೆವಿಲಿಯನ್‌ಗೆ ಅಟ್ಟುವಲ್ಲಿ ಸಫಲವಾಗಿದ್ದರು. ಇದು ಭಾರತ ತಂಡ ದೊಡ್ಡ ಮೊತ್ತವನ್ನು ಗಳಿಸದಂತೆ ಮಾಡುವಲ್ಲಿ ಪಾಕ್ ತಂಡಕ್ಕೆ ಸಹಾಯವಾಗಿತ್ತು.

ಭಾನುವಾರ ನಡೆಯಲಿದೆ ಬಹು ನಿರೀಕ್ಷಿತ ಪಂದ್ಯ
ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಂದು ನಡೆಯಲಿದ್ದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಚಾಲನೆ ದೊರೆಯಲಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಮಡಗಳು ಮುಖಾಮುಖಿಯಾಗಲಿದ್ದು ಈ ಪಂದ್ಯ ಭಾನುವಾರ ನಡೆಯಲಿದೆ. ಬದ್ಧ ಎದುರಾಳಿಗಳ ಈ ಕದನ ಈಗ ಸಾಕಷ್ಟು ಕುತೂಹಲ ಮೂಡಿಸಿದ್ದು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್,
ಪಾಕಿಸ್ತಾನ್: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications