ಜುಲೈ 23 ಮಂಗಳವಾರ, ಭಾರತ ತಂಡವು 2012 ರಿಂದ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸರಣಿಗಳನ್ನು ಸ್ಥಗಿತಗೊಳಿಸಿದೆ. ನಂತರ ಪಾಕಿಸ್ತಾನವು ಅಲ್ಪಾವಧಿಯ ಸೀಮಿತ ಓವರ್‌ಗಳ ಸರಣಿಗಾಗಿ ಭಾರತಕ್ಕೆ ಪ್ರವಾಸ ಮಾಡಿತು.
2007ರಲ್ಲಿ ಪಾಕಿಸ್ತಾನದ ಭಾರತ ಪ್ರವಾಸದ ನಂತರ, ಉಭಯ ದೇಶಗಳು ಯಾವುದೇ ಟೆಸ್ಟ್ ಸರಣಿಯನ್ನು ಆಡಿಲ್ಲ. ಕೇವಲ ಐಸಿಸಿ ಆಯೋಜಿಸುವ ಪ್ರತಿಷ್ಠಿತ ಟೂರ್ನಿಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.

ಈ ನಡುವೆ ಕೊಲಂಬೊದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿಯಾಗಲಿರುವ ನಖ್ವಿ ಮುಂದಿನ ವರ್ಷ 2025ರ ಸಮಯದಲ್ಲಿ ತಟಸ್ಥ ಸ್ಥಳದಲ್ಲಿ ಟಿ20 ಸರಣಿಗೆ ಭಾರತವನ್ನು ಆಹ್ವಾನಿಸಲಿದ್ದಾರೆ ಎಂದು ಊಹಿಸಲಾಗಿತ್ತು.
ಆದರೆ ಊಹಾಪೋಹಗಳಿಗೆ ತೆರೆ ಎಳೆದಿರುವ ಪಿಸಿಬಿ ತಟಸ್ಥ ಸ್ಥಳದಲ್ಲಿ ಭಾರತ ವಿರುದ್ಧ ಟಿ20ಐ ಸರಣಿಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸೋಮವಾರ ತಿಳಿಸಿದೆ. ಭಾರತ ವಿರುದ್ಧ ಟಿ20 ಸರಣಿ ಆಡುವ ಯಾವುದೇ ಪ್ರಸ್ತಾವನೆಯನ್ನು ಮಾಡಿಲ್ಲ. ಚಾಂಪಿಯನ್ಸ್ ಟ್ರೋಫಿಯನ್ನು ಸುಗಮವಾಗಿ ಆಯೋಜಿಸುವತ್ತ ಗಮನ ಹರಿಸಲಾಗಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ವಿದೇಶಿ ಸ್ಥಳದಲ್ಲಿ ಟಿ20 ಸರಣಿ ಆಡಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂಬ ಚರ್ಚೆಗಳಿವೆ.
ಐಸಿಸಿ ವಾರ್ಷಿಕ ಸಭೆಯಲ್ಲಿ ಪಿಸಿಬಿಯ ಎರಡು ಪ್ರಮುಖ ಉದ್ದೇಶಗಳು ಚಾಂಪಿಯನ್ಸ್ ಟ್ರೋಫಿಗೆ ಬಜೆಟ್ ಅನ್ನು ಅಂಗೀಕರಿಸುವುದು ಮತ್ತು ಭಾರತವು ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಐಸಿಸಿ ಮತ್ತು ಬಿಸಿಸಿಐನಿಂದ ಭರವಸೆ ಪಡೆಯುವುದು ಎಂದು ಮೂಲಗಳು ತಿಳಿಸಿವೆ.
ಭಾರತ ತಂಡ ಕಳೆದ ವರ್ಷ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಇದರಿಂದಾಗಿ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾಆನ ತೀವ್ರ ಮುಖಭಂಗ ಅನುಭವಿಸಿತ್ತು.
ಐಸಿಸಿ ವಾರ್ಷಿಕ ಸಭೆಯಲ್ಲಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಶಾ ಮನವೊಲಿಸಲು ನಖ್ವಿ ಪ್ರಯತ್ನಿಸಲಿದ್ದಾರೆ ಎಂದು ಮಾಹಿತಿ ಇತ್ತು. ಆದರೆ ಈ ಬಗ್ಗೆ ಸಭೆ ನಂತರ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ಬಿಸಿಸಿಐ ಅಲ್ಲ, ಕೇಂದ್ರ ಸರ್ಕಾರ.