ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಭಾನುವಾರ (ಫೆ.15) ಕೊಲಂಬೊದಲ್ಲಿ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. ಭಾರತ ಈಗಾಗಲೇ ಲೀಗ್ ಹಂತದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಇತ್ತ ಪಾಕಿಸ್ತಾನ ಸಹ ಇದೇ ಆಸೆಯನ್ನು ಹೊಂದಿದೆ. ಎರಡೂ ತಂಡಗಳು ಭರ್ಜರಿ ಫಾರ್ಮ್‌ನಲ್ಲಿದ್ದು, ರೋಚಕತೆ ಹೆಚ್ಚಿಸಿದೆ.
ಭಾರತ, ಪಾಕಿಸ್ತಾನ ನಡುವಣ ಪಂದ್ಯಕ್ಕಾಗಿ ಅಂತಿಮ ಸಿದ್ಧತೆಗಳು ಸಹ ಪೂರ್ಣಗೊಂಡಿವೆ. ಟೀಮ್ ಇಂಡಿಯಾ ಸಹ ಈ ಪಂದ್ಯಕ್ಕಾಗಿ ಬೇಕಾಗಿರುವ ರಣ ತಂತ್ರವನ್ನು ರೂಪಿಸಿಕೊಳ್ಳುತ್ತಿದೆ. ಭಾರತ ಬಿಗ್ ಫೈಟ್‌ಗಾಗಿ ಕೊನೆಯ ಹಂತದ ತಾಲೀಮು ನಡೆಸುತ್ತಿದೆ. ಇನ್ನು ಟೀಮ್ ಇಂಡಿಯಾ ಕೊಲಂಬೊದಲ್ಲಿ ಯಾವ ಕಾಂಬಿನೇಷನ್‌ನಿಂದ ಕಣಕ್ಕೆ ಇಳಿಯುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಪಾಕಿಸ್ತಾನ ಇದೇ ಅಂಗಳದಲ್ಲಿ ಎರಡೂ ಪಂದ್ಯಗಳನ್ನು ಆಡಿದೆ. ಹೀಗಾಗಿ ಪಾಕಿಸ್ತಾನಕ್ಕೆ ಈ ಪಿಚ್ ಮರ್ಮ ಚೆನ್ನಾಗಿ ಅರಿವಿದೆ. ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಟೀಮ್ ಇಂಡಿಯಾ ದೊಡ್ಡ ಪಂದ್ಯಕ್ಕಾಗಿ ಲೆಕ್ಕಾಚಾರ ಆರಂಭಿಸಿದೆ. ಯಾರಿಗೆ ಸ್ಥಾನ ನೀಡಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಹಾಗಿದ್ದರೆ ಸ್ಪಿನ್ ವಿಭಾಗವನ್ನು ಬಲಪಡಿಸಿಕೊಳ್ಳಲು ಭಾರತ ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ವರದಿ ಇಲ್ಲಿದೆ.
ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಅರ್ಶದೀಪ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಿ ಇವರ ಸ್ಥಾನದಲ್ಲಿ ಇನ್ನೊಬ್ಬ ಸ್ಪಿನ್ ಬೌಲರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ. ಇವರ ಸ್ಥಾನವನ್ನು ಕುಲ್‌ದೀಪ್ ಯಾದವ್ ತುಂಬಲು ಸಿದ್ಧರಾಗಿದ್ದಾರೆ. ಆಗ ತಂಡದಲ್ಲಿ ವರುಣ್, ಕುಲ್‌ದೀಪ್ ನುರಿತ ಸ್ಪಿನ್ ಬೌಲರ್ ರೂಪದಲ್ಲಿ ಆಡಿದರೆ, ಅಕ್ಷರ್ ಪಟೇಲ್ ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ.
ಒಂದು ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಫಿಟ್ ಆಗಿದ್ದರೆ, ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗುತ್ತಿದೆ. ಏಕೆಂದರೆ ಅಭಿಷೇಕ್ ಎಡಗೈಯಿಂದ ಸ್ಪಿನ್ ಬೌಲಿಂಗ್ ಸಹ ಮಾಡಬಲ್ಲರು. ಹೀಗಾಗಿ ಇವರು ಫಿಟ್ ಆದಲ್ಲಿ ತಂಡ ಇವರ ಪ್ರಯೋಜನವನ್ನು ಪಡೆಯುವ ಆಯ್ಕೆಯನ್ನು ಸಹ ಹೊಂದಿದೆ. ಆಗ ವರುಣ್ ಮಾತ್ರ ನುರಿತ ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಉಳಿದಂತೆ ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ಆಲ್‌ರೌಂಡರ್ ಕೋಟಾದಲ್ಲಿ ಸ್ಥಾನ ಪಡೆಯಬಹುದು. ಇನ್ನೂ ಒಬ್ಬ ಸ್ಪಿನ್ ಬೌಲರ್ ಬೇಕು ಎಂದು ಮ್ಯಾನೇಜ್ಮೆಂಟ್‌ಗೆ ಅನಿಸಿದಲ್ಲಿ ಅರ್ಶದೀಪ್ ಅವರನ್ನು ಕೂರಿಸಿ, ಕುಲ್‌ದೀಪ್‌ಗೆ ಅವಕಾಶ ನೀಡಬಹುದು.
ಒಂದು ವೇಳೆ ಅಭಿಷೇಕ್ ಶರ್ಮಾ ಫಿಟ್ ಆಗದೇ ಇದಲ್ಲಿ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಲು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬಹುದು. ಅಲ್ಲದೆ ಕ್ರಿಕೆಟ್ ತಜ್ಞರ ಪ್ರಕಾರ ಅವರನ್ನು ಆರಂಭಿಕರಾಗಿ ಕಣಕ್ಕೂ ಇಳಿಸಬಹುದು. ಇದರಿಂದ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಸ್ಟ್ರಾಂಗ್ ಆಗುತ್ತದೆ. ಆಗ ಸಂಜು ಹೊರಗೆ ಕೂಡುತ್ತಾರೆ. ಆಗ ಪಿಚ್ ಪರಿಸ್ಥಿತಿಯನ್ನು ನೋಡಿಕೊಂಡು ಅರ್ಶದೀಪ್ ಅವರಿಗೆ ಸ್ಥಾನ ನೀಡುವ ಬಗ್ಗೆ ತಂಡ ಚಿಂತಿಸಬಹುದು. ಈ ಎಲ್ಲ ಆಯ್ಕೆಗಳಲ್ಲಿ ಟೀಮ್ ಇಂಡಿಯಾ ಭಾನುವಾರ ಯಾವ ಆಯ್ಕೆಯನ್ನು ಆಯ್ದುಕೊಳ್ಳುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.