ಇಂಗ್ಲೆಂಡ್ ಮಂಡಳಿ ಉತ್ಸಾಹಕ್ಕೆ ತಣ್ಣೀರೆರಚಿದ ಬಿಸಿಸಿಐ: ಭಾರತ vs ಪಾಕಿಸ್ತಾನ ಟೆಸ್ಟ್ ಸರಣಿ ಆಯೋಜನೆಗೆ ರೆಡ್ ಸಿಗ್ನಲ್

ಭಾರತ ಹಾಗೂ ಪಾಕಿಸ್ತಾನ ತಂಡಗಳು ಸುದೀರ್ಘ ಕಾಲದಿಂದ ದ್ವಿಕ್ಷೀಯ ಸರಣಿಯಲ್ಲಿ ಭಾಗಿಯಾಗಿಲ್ಲ. ಸೀಮಿತ ಓವರ್‌ಗಳ ಮಾದರಿಯಲ್ಲಿ ವಿಶ್ವಕಪ್‌ನಂಥಾ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದರೂ ಟೆಸ್ಟ್ ಸರಣಿಯನ್ನು ಆಡದೆ ದಶಕಗಳೇ ಕಳೆದಿದೆ. ಈ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ತನ್ನ ನೆಲದಲ್ಲಿ ಆಯೋಜನೆ ಮಾಡುವಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಉತ್ಸಾಹ ತೋರಿಸಿದೆ ಎನ್ನಲಾಗಿತ್ತು. ಆದರೆ ಇಸಿಬಿ ತೋರಿಸಿದ ಈ ಉತ್ಸಾಹಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಣ್ಣೀರೆರಚಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯನ್ನು ಆಯೋಜನೆ ಮಾಡುವ ಅನೌಪಚಾರಿಕ ಪ್ರಸ್ತಾವನೆಯನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುವ ಸಾಧ್ಯತೆ ಸದ್ಯದ ಮಟ್ಟಿಗೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಮೂಲಕ ಇಸಿಬಿ ಉತ್ಸಾಹವನ್ನು ಬಿಸಿಸಿಐ ತಿರಸ್ಕರಿಸಿದೆ.

ಬಿಸಿಸಿಐ ಮೂಲಗಳು ಹೇಳಿದ್ದೇನು?
"ಮೊದಲನೆಯದಾಗಿ ಇಸಿಬಿ ಭಾರತ ಪಾಕ್ ಸರಣಿಯ ಬಗ್ಗೆ ಪಿಸಿಬಿ ಜೊತೆಗೆ ಮಾತುಕತೆ ನಡೆಸಿರುವುದೇ ವಿಲಕ್ಷಣ. ಯಾವುದೇ ಹಂತದಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಯ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅದು ಸರ್ಕಾರದ ನಿರ್ಧಾರವಾಗಿರುತ್ತದೆ. ಈವರೆಗೂ ಅದೇ ಪರಿಸ್ಥಿರಿಯಲ್ಲಿ ಮುಂದುವರಿಯುತ್ತದೆ. ಪಾಕಿಸ್ತಾನದ ವಿರುದ್ಧ ನಾವು ಕೇವಲ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಮಾತ್ರವೇ ಆಡುತ್ತೇವೆ" ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

2013ರಲ್ಲಿ ಅಂತಿಮ ದ್ವಿಪಕ್ಷೀಯ ಸರಣಿ, 2007ರಲ್ಲಿ ಅಂತಿಮ ಟೆಸ್ಟ್ ಸರಣಿ
ಗಮನಾರ್ಹ ಸಂಗತಿಯೆಂದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ಆಯೋಜನೆಯಾಗಿ ಬಹುತೇಕ ದಶಕವೇ ಕಳೆದಿದೆ. 2013ರಲ್ಲಿ ಈ ಎರಡು ತಂಡಗಳ ಮಧ್ಯೆ ಅಂತಿಮ ದ್ವಿಪಕ್ಷೀಯ ಸರಣಿ ಆಯೋಜನೆಯಾಗಿದೆ. ಇನ್ನು ಎರಡು ತಂಡಗಳ ಮಧ್ಯೆ ಟೆಸ್ಟ್ ಸರಣಿ ಆಯೋಜನೆಯಾಗದೆ ಭರ್ತಿ 15 ವರ್ಷಗಳು ಕಳೆದಿದ್ದು 2007ರ ಬಳಿಕ ಈ ಎರಡು ತಂಡಗಳ ಮಧ್ಯೆ ಟೆಸ್ಟ್ ಸರಣಿ ಆಯೋಜನೆಯಾಗಿಲ್ಲ.

ಪಿಸಿಬಿ ಚೇರ್ಮನ್ ಜೊತೆ ಇಸಿಬಿ ಚರ್ಚೆ
ಸದ್ಯ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ಮಧ್ಯೆ 7 ಪಂದ್ಯಗಳ ಟಿ20 ಸರಣಿ ಆಯೋಜನೆಯಾಗುತ್ತಿದೆ. ಇಂಗ್ಲೆಂಡ್ ತಂಡ ಪಾಕ್ ಪ್ರವಾಸ ಕೈಗೊಂಡು ಈ ಸರಣಿಯಲ್ಲಿ ಭಾಗಿಯಾಗಿದೆ. ಈ ಸಂದರ್ಭದಲ್ಲಿ ಇಸಿಬಿಯ ಡೆಪ್ಯುಟಿ ಚೇರ್ಮನ್ ಮಾರ್ಟಿನ್ ಡೇರ್ಲೋ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಪಿಸಿಬಿ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಡೆರ್ಲೋ ಪಿಸಿಬಿ ಮುಖ್ಯಸ್ಥರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಆಯೋಜನೆಯ ಪ್ರಸ್ತಾವನೆಯನ್ನು ಮುಂದಿಟ್ಟರು.

ಇಸಿಬಿ ಆಸಕ್ತಿಗೆ ಕಾರಣ ಬಹಿರಂಗ
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಆಯೋಜನೆಗೆ ಇಸಿಬಿ ಇಷ್ಟೊಂದು ಆಸಕ್ತಿ ತೊರಿಸುತ್ತಿರುವುದಕ್ಕೆ ಕಾರಣವೇನೆಂಬುದು ಕೂಡ ಬಹಿರಂಗವಾಗಿದೆ. ಈ ಬಗ್ಗೆ ಡೈಲಿ ಟೆಲಿಗ್ರಾಫ್ ವರದಿ ಮಾಡಿದ್ದು ಈ ವರದಿಯ ಪ್ರಕಾರ " ಯುಕೆಯಲ್ಲಿ ದಕ್ಷಿಣ ಏಷ್ಯಾ ಭಾಗದ ದೊಡ್ಡ ಪ್ರಮಾಣದ ಜನಸಂಖ್ಯೆ ಇರುವ ಕಾರಣ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಸೆಳೆಯುತ್ತದೆ. ಅಲ್ಲದೆ ಈ ಪಂದ್ಯಗಳು ದೊಡ್ಡ ಮಟ್ಟದ ಜಾಹೀರಾತು ಆದಾಯ ಹಾಗೂ ಟೆಲಿವಿಶನ್ ವೀಕ್ಷಕರನ್ನು ಕೂಡ ಸೆಳೆಯುತ್ತದೆ" ಎಂದು ವರದಿ ಮಾಡಿದೆ. ಇನ್ನು ಪಾಕಿಸ್ತಾನ ತಂಡ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಆಯೋಜನೆ ಮಾಡಲು ಹಲವು ಸಂದರ್ಭದಲ್ಲಿ ತನ್ನ ಆಸಕ್ತಿಯನ್ನು ತೋರ್ಪಡಿಸಿದೆ. ಆದರೆ ಬಿಸಿಸಿಐ ಪಾಕಿಸ್ತಾನದ ಮನವಿಗಳನ್ನು ತಿರಸ್ಕರಿಸುತ್ತಲೇ ಬಂದಿದೆ. ಎರಡು ದೇಶಗಳ ನಡುವಿನ ಸಂಭಂಧ ಸರಿಯಾಗದ ಹೊರತು ಕ್ರಿಕೆಟ್ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದೆ ಬಿಸಿಸಿಐ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications