ಶನಿವಾರ, ಅಕ್ಟೋಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಮೋಘ ಗೆಲುವು ಸಾಧಿಸಿದ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಬೌಲರ್‌ಗಳನ್ನು ಶ್ಲಾಘಿಸಿದರು.
ಭಾರತ ಇದೀಗ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಎಲ್ಲಾ 8 ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯ ದಾಖಲೆ ಮುಂದುವರೆಸಿದೆ.
ರೋಹಿತ್ ಶರ್ಮಾ ಮತ್ತೊಮ್ಮೆ ಮುಂದೆ ನಿಂತು ಆಡಿದರು. ಅಫ್ಘಾನಿಸ್ತಾನ ವಿರುದ್ಧ 131 ರನ್ ಗಳಿಸಿದ ಮೂರೇ ದಿನಗಳ ನಂತರ, ಏಕಪಕ್ಷೀಯ ಪಂದ್ಯದಲ್ಲಿ ಪಾಕಿಸ್ತಾನ ಸೋಲಿಸಲು ಸೊಗಸಾದ 86 ರನ್ ಬಾರಿಸಿದರು.

ಭಾರತ 192 ರನ್‌ಗಳ ಸುಲಭ ಗುರಿ ಬೆನ್ನಟ್ಟಿತು. ಆದರೆ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಆದಾಗ್ಯೂ, ಈ ಹಿನ್ನಡೆಗಳು ಭಾರತ ತಂಡದ ಮೇಲೆ ಪರಿಣಾಮ ಬೀರದಂತೆ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ನೋಡಿಕೊಂಡರು.
ಭಾರತ ತಂಡ ಕೇವಲ 30.3 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟುವ ಮೂಲಕ ನೆಟ್ ರನ್‌ರೇಟ್ ಅನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇದಕ್ಕೂ ಮುನ್ನ ಭಾರತದ ಬೌಲರ್‌ಗಳು ತಂಡದ ಗೆಲುವನ್ನು ಖಚಿತಪಡಿಸಿದ್ದರು. ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಪಾಕಿಸ್ತಾನ 42.5 ಓವರ್‌ಗಳಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆಯಿತು.
ರೋಹಿತ್ ಶರ್ಮಾ ತಮ್ಮ ಬೌಲಿಂಗ್ ಬದಲಾವಣೆ ಮತ್ತು ಫೀಲ್ಡ್ ಪ್ಲೇಸ್‌ಮೆಂಟ್‌ಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಂಡರು. ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಜಸ್ಪ್ರೀತ್ ಬುಮ್ರಾ ವಿರುದ್ಧ ಪಾಕಿಸ್ತಾನದ ಬ್ಯಾಟರ್‌ಗಳು ರನ್ ಗಳಿಸಲು ಹೆಣಗಾಡಿದರು. ಬುಮ್ರಾ 7 ಓವರ್‌ಗಳಲ್ಲಿ 19 ರನ್‌ಗಳಿಗೆ 2 ವಿಕೆಟ್‌ಗಳನ್ನು ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ತಲಾ ಎರಡು ವಿಕೆಟ್ ಪಡೆದರು.
ಒಂದು ಹಂತದಲ್ಲಿ ಪಾಕಿಸ್ತಾನ ತಂಡ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ನಂತರದ 36 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 191 ರನ್‌ಗಳಿಗೆ ಸರ್ವಪತನ ಕಂಡಿತು.

ವಿಶ್ವಕಪ್‌ನ ಈ ಆವೃತ್ತಿಯಲ್ಲಿ ಭಾರತವು ತನ್ನ ಎದುರಾಳಿಗಳನ್ನು 200 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ್ದು ಇದು ಎರಡನೇ ಬಾರಿ. ತಮ್ಮ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 199 ರನ್‌ಗಳಿಗೆ ಆಲೌಟ್ ಮಾಡಿತ್ತು. ಹೀಗಾಗಿ ಭಾರತ ತಂಡದ ರೋಹಿತ್ ಶರ್ಮಾ ತಮ್ಮ ಬೌಲರ್‌ಗಳನ್ನು ಹೊಗಳಿದರು.
"ಇಂದು ನಮ್ಮ ಬೌಲರ್‌ಗಳು ನಮಗೆ ಪಂದ್ಯವನ್ನು ಹೊಂದಿಸಿದ್ದಾರೆ. ಇದು 190 ರನ್‌ಗಳ ಪಿಚ್ ಎಂದು ನಾನು ಭಾವಿಸುವುದಿಲ್ಲ. ಒಂದು ಹಂತದಲ್ಲಿ ನಾವು 280 ರನ್‌ಗಳ ಟಾರ್ಗೆಟ್ ಅನ್ನು ನೋಡುತ್ತಿದ್ದೆವು".
"ಬೌಲರ್‌ಗಳು ತೋರಿಸಿದ ರೀತಿ ತುಂಬಾ ಹೇಳುತ್ತದೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಯಾರು ಚೆಂಡನ್ನು ಪಡೆಯುತ್ತಾರೋ ಅವರು ಕೆಲಸವನ್ನು ಮಾಡುತ್ತಾರೆ. ಚೆಂಡಿನೊಂದಿಗೆ ಕೆಲಸ ಮಾಡುವ 6 ಬೌಲರ್‌ಗಳನ್ನು ನಾವು ಹೊಂದಿದ್ದೇವೆ," ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ಇದೇ ವೇಳೆ ರೋಹಿತ್ ಶರ್ಮಾ ತಾಳ್ಮೆಯಿಂದ ಇರುವ ಅಗತ್ಯವನ್ನು ಒತ್ತಿಹೇಳಿದರು ಮತ್ತು ಫಲಿತಾಂಶಗಳಿಂದ ದೂರ ಹೋಗಬೇಡಿ ಎಂದರು.
ಭಾರತ ತಂಡ 10 ವರ್ಷಗಳಲ್ಲಿ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ. 2015 ಮತ್ತು 2019ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಉನ್ನತ ಫಾರ್ಮ್‌ನಲ್ಲಿತ್ತು. ಆದರೆ ಅಂತಿಮವಾಗಿ ಸೆಮಿಫೈನಲ್‌ನಲ್ಲಿ ಸೋಲಬೇಕಾಯಿತು.
ಈ ವರ್ಷ ಭಾರತವು ವಿಶ್ವಕಪ್ ಗೆಲ್ಲುವ ಅಗ್ರ ನೆಚ್ಚಿನ ತಂಡವಾಗಿದೆ ಮತ್ತು ಅವರು ಇಲ್ಲಿಯವರೆಗೆ ಚಾಂಪಿಯನ್‌ಗಳಂತೆ ಆಡಿದ್ದಾರೆ. ಆಟಗಾರರು ಸಮತೋಲಿತವಾಗಿರುವುದು ಮುಖ್ಯ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.
"ಒಟ್ಟಿನಲ್ಲಿ ಇದು ಚೆನ್ನಾಗಿ ಕಾಣುತ್ತದೆ. ನಾನು ಹೆಚ್ಚು ಉತ್ಸುಕನಾಗಲು ಬಯಸುವುದಿಲ್ಲ. ನಾವು ಸಮತೋಲನದಲ್ಲಿರಲು ಬಯಸುತ್ತೇವೆ, ಶಾಂತವಾಗಿರಿ ಮತ್ತು ಮುನ್ನೆಡೆಯುತ್ತಾ ಸಾಗಿರಿ. ನಾವು ಎದುರಿಸುವ ಪ್ರತಿಯೊಂದು ಎದುರಾಳಿಯು ಗುಣಮಟ್ಟದ್ದಾಗಿವೆ. ಆ ನಿರ್ದಿಷ್ಟ ದಿನದಂದು ನೀವು ಚೆನ್ನಾಗಿ ಆಡಬೇಕು ಮತ್ತು ಅದನ್ನೇ ನಾವು ನೋಡುತ್ತಿದ್ದೇವೆ," ಎಂದು ರೋಹಿತ್ ಶರ್ಮಾ ತಿಳಿಸಿದರು.