
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿ, ಎರಡೂ ಸರಣಿಗಳಲ್ಲಿಯೂ ಸೋಲುವುದರ ಮೂಲಕ ಮುಖಭಂಗಕ್ಕೊಳಗಾಯಿತು. ಹೀಗೆ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿಯೂ ಸೋಲುಣಿಸಿದ ಭಾರತ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲು ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಎರಡೂ ಸರಣಿಗಳನ್ನು ಗೆದ್ದು ಯಶಸ್ಸಿನ ಅಲೆಯಲ್ಲಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು, 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಳನ್ನು ಆಡಲಿದೆ.
ಹೌದು, ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು ಡಿಸೆಂಬರ್ 16ರಂದು ಟೀಮ್ ಇಂಡಿಯಾ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ಹಾರಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲು ಟೆಸ್ಟ್ ಸರಣಿ ನಡೆಯುವ ಕಾರಣದಿಂದಾಗಿ ಮೊದಲಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ 21 ಆಟಗಾರರ ಟೆಸ್ಟ್ ತಂಡವನ್ನು ಪ್ರಕಟಿಸಿತು. ಹೀಗೆ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡವನ್ನು ಪ್ರಕಟಿಸಿದ 2 ದಿನಗಳ ಬಳಿಕ ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿತು. ಹೀಗೆ ಬಿಸಿಸಿಐ ಪ್ರಕಟಿಸಿದ ಟೆಸ್ಟ್ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯೊಂದಾಗಿದ್ದು ಅಜಿಂಕ್ಯ ರಹಾನೆ ತಮ್ಮ ಉಪನಾಯಕ ಸ್ಥಾನವನ್ನು ಕಳೆದುಕೊಂಡಿದ್ದು ಭಾರತ ಟೆಸ್ಟ್ ತಂಡದ ನೂತನ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು.
ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟವಾಗಿರುವ ಭಾರತ ತಂಡದಲ್ಲಿ ತಮ್ಮ ಟೆಸ್ಟ್ ಉಪನಾಯಕನ ಸ್ಥಾನವನ್ನು ಕಳೆದುಕೊಂಡಿರುವ ಅಜಿಂಕ್ಯ ರಹಾನೆ ತಂಡದಲ್ಲಿ ಆಟಗಾರನಾಗಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಅಜಿಂಕ್ಯ ರಹಾನೆ ಚೇತೇಶ್ವರ್ ಪೂಜಾರ ಮತ್ತು ಇಶಾಂತ್ ಶರ್ಮಾ ಈ ಮೂವರೂ ಆಟಗಾರರಿಗೂ ಕೂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂಬ ದೊಡ್ಡ ಸುದ್ದಿ ಹಬ್ಬಿತ್ತು. ಹೌದು, ಇತ್ತೀಚೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಸಾಲುಸಾಲು ಕಳಪೆ ಪ್ರದರ್ಶನ ನೀಡಿರುವ ಈ ಮೂವರು ಆಟಗಾರರಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವಕಾಶ ನೀಡಲು ಬಿಸಿಸಿಐ ಹಿಂದೇಟು ಹಾಕುತ್ತಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಹಾಗೂ ವಿರಾಟ್ ಕೊಹ್ಲಿ ಈ ಮೂವರು ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂಬ ವಿಷಯವೂ ಕೂಡ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.
ಕೊನೆಗೆ ಬಿಸಿಸಿಐ ಪ್ರಕಟಿಸಿದ ಭಾರತ ತಂಡದಲ್ಲಿ ಈ ಮೂವರು ಆಟಗಾರರು ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಈ ಟೆಸ್ಟ್ ಸರಣಿ ಮೂವರಿಗೂ ಸಹ ಮಾಡು ಇಲ್ಲವೇ ಮಡಿ ಟೆಸ್ಟ್ ಸರಣಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿಯೂ ಕಳೆದ 2 ವರ್ಷಗಳಿಂದ ಸಾಲು ಸಾಲು ಕಳಪೆ ಪ್ರದರ್ಶನ ನೀಡಿರುವ ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲೇಬೇಕಾಗಿದ್ದು ಇಬ್ಬರೂ ಸಹ ಟೆಸ್ಟ್ ಆರಂಭಕ್ಕೆ 2 ವಾರಗಳು ಬಾಕಿ ಇರುವಾಗಲೇ ಮೈದಾನಕ್ಕಿಳಿದು ಬೆವರು ಹರಿಸಲು ಶುರು ಮಾಡಿದ್ದಾರೆ.
ಹೀಗೆ ಮೈದಾನಕ್ಕಿಳಿದು ನೆಟ್ ಅಭ್ಯಾಸ ನಡೆಸಿ ಬೆವರು ಹರಿಸುತ್ತಿರುವ ಈ ಇಬ್ಬರೂ ಸಹ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಗಳಲ್ಲಿ ತಮ್ಮ ತಮ್ಮ ಪ್ರತ್ಯೇಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದರ ಮೂಲಕ ತಮ್ಮ ಅನುಯಾಯಿಗಳ ಜತೆ ಅಭ್ಯಾಸದ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ನೆಟ್ ಪ್ರಾಕ್ಟೀಸ್ ವೇಳೆ ಬ್ಯಾಟ್ ಬೀಸಿ ಕಸರತ್ತು ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರೆ, ಚೇತೇಶ್ವರ್ ಪೂಜಾರ ತಮ್ಮ ಕ್ರಿಕೆಟ್ ಕಿಟ್ ಮತ್ತು ತಾವು ವ್ಯಾಯಾಮ ಮಾಡುವ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯ ರೀಲ್ಸ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.