
ಟಿ ಟ್ವೆಂಟಿ ವಿಶ್ವಕಪ್ ಮುಗಿದ ನಂತರ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಹಾಗೂ ಟಿ ಟ್ವೆಂಟಿ ಸರಣಿಗಳನ್ನು ಆಡಿದ ಟೀಮ್ ಇಂಡಿಯಾ ಈ ಎರಡೂ ಸರಣಿಗಳಲ್ಲಿಯೂ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಹೀಗೆ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಕಣಕ್ಕಿಳಿಯಲಿದೆ.
ಈಗಾಗಲೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ತಲುಪಿದ್ದು ಪ್ರಿಟೋರಿಯಾದ ಪಂಚತಾರಾ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದು ಬಯೋ ಬಬಲ್ ವ್ಯವಸ್ಥೆಯನ್ನು ಪಾಲಿಸುತ್ತಿದೆ. ಇದರ ಜೊತೆಗೆ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯಕ್ಕೋಸ್ಕರ ಅಭ್ಯಾಸವನ್ನು ಕೂಡ ಟೀಮ್ ಇಂಡಿಯಾ ಆಟಗಾರರು ಆರಂಭಿಸಿದ್ದು, ರಾಹುಲ್ ದ್ರಾವಿಡ್ ಸಲಹೆ ಅಡಿಯಲ್ಲಿ ವಿಭಿನ್ನ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಇನ್ನು ಮೊದಲು ಯೋಜಿಸಿದ್ದ ರೀತಿಯೇ ಎಲ್ಲಾ ನಡೆದಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಹೌದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಸರಣಿಗಳ ಮೇಲೆ ಕೂಡ ಪ್ರಭಾವವನ್ನು ಬೀರಿದೆ. ಮೊದಲಿಗೆ ಸೋಂಕಿತರ ಹೆಚ್ಚಳದಿಂದ ಟಿ ಟ್ವೆಂಟಿ ಸರಣಿಯನ್ನು ಕಡಿತಗೊಳಿಸಿದ ಕ್ರಿಕೆಟ್ ಸೌತ್ ಆಫ್ರಿಕಾ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿರುವ ಯಾವುದೇ ಪಂದ್ಯಗಳಿಗೂ ಸಹ ಪ್ರೇಕ್ಷಕರಿಗೆ ಅನುಮತಿ ನೀಡುವುದಿಲ್ಲ ಎಂಬ ನಿರ್ಧಾರವನ್ನು ಘೋಷಿಸಿತು.
ಕಟ್ಟುನಿಟ್ಟಿನ ಬಯೋ ಬಬಲ್ ವ್ಯವಸ್ಥೆಯಲ್ಲಿರುವ ಆಟಗಾರರಿಗೆ ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಂದ ಸೋಂಕು ಹರಡಬಾರದು ಎಂಬ ಮುನ್ನೆಚ್ಚರಿಕಾ ಕ್ರಮದಿಂದ ಕ್ರಿಕೆಟ್ ಸೌತ್ ಆಫ್ರಿಕಾ ಈ ನಿರ್ಧಾರವನ್ನು ಪ್ರಕಟಿಸಿದೆ. ಹೀಗೆ ಒಂದೆಡೆ ಕೊರೋನಾವೈರಸ್ ಒತ್ತಡ ಮತ್ತು ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಟೀಮ್ ಇಂಡಿಯಾ ಆಟಗಾರರಿಗೆ ಇಂದು ನಡೆದ ಫೋಟೋ ಶೂಟ್ ಕೊಂಚ ನಿರಾಳತೆಯನ್ನು ತಂದಿದೆ. ಹೌದು, ಟೀಮ್ ಇಂಡಿಯಾ ಆಟಗಾರರು ತಮ್ಮ ಟೆಸ್ಟ್ ಜರ್ಸಿಗಳನ್ನು ತೊಟ್ಟು ಕ್ಯಾಮೆರಾಗೆ ಭಿನ್ನವಿಭಿನ್ನವಾಗಿ ಪೋಸ್ ನೀಡುತ್ತಾ ಫೋಟೋಶೂಟ್ ಮಾಡಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ತಂಡದ ಆಟಗಾರರು ಭಿನ್ನ ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ದೃಶ್ಯಗಳನ್ನು ಕಂಡ ನೆಟ್ಟಿಗರು ಕೆಲ ಹಾಸ್ಯಾಸ್ಪದ ಕಾಮೆಂಟ್ ಮಾಡುತ್ತಾ ಟೀಮ್ ಇಂಡಿಯಾ ಆಟಗಾರರ ಕಾಲನ್ನು ಎಳೆದಿದ್ದಾರೆ.