
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಮೊದಲಿಗೆ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದು ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಶುಭಾರಂಭ ಮಾಡಿದೆ. ಹೌದು, ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಡಿಸೆಂಬರ್ 26ರಂದು ಆರಂಭವಾಗಿದ್ದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 113 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿದೆ.
ಸೆಂಚುರಿಯನ್ ಕ್ರೀಡಾಂಗಣದಲ್ಲಿ ಏಷ್ಯಾದ ಯಾವುದೇ ತಂಡ ಕೂಡ ಟೆಸ್ಟ್ ಪಂದ್ಯವೊಂದನ್ನು ಇಲ್ಲಿಯವರೆಗೂ ಕೂಡ ಗೆದ್ದಿರಲಿಲ್ಲ. ಟೀಮ್ ಇಂಡಿಯಾ ಕೂಡ ಇದೇ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದಿದ್ದ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಲಾಗದೇ ಮಂಕಾಗಿತ್ತು. ಆದರೆ ಇದೀಗ ಸೆಂಚುರಿಯನ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಪಡೆ ಇನ್ನೂ ಒಂದೂವರೆ ಸೆಷನ್ ಬಾಕಿ ಇರುವಾಗಲೇ ಬೃಹತ್ ಮೊತ್ತದ ಅಂತರದಿಂದ ಜಯ ಸಾಧಿಸಿ ಕೆಟ್ಟ ದಾಖಲೆಯನ್ನು ಅಳಿಸಿಹಾಕಿದೆ. ಈ ಮೂಲಕ ಭಾರತ ಟೆಸ್ಟ್ ತಂಡ ಆಸ್ಟ್ರೇಲಿಯಾದ ಗಬ್ಬಾ, ಇಂಗ್ಲೆಂಡ್‌ನ ಓವಲ್ ಮತ್ತು ಲಾರ್ಡ್ಸ್ ಹಾಗೂ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಹೀಗೆ ಭಿನ್ನ ವಿಭಿನ್ನ ದೇಶಗಳ ಕಠಿಣ ಕ್ರೀಡಾಂಗಣಗಳಲ್ಲಿ ಗೆದ್ದು ವಿಜಯ ಪತಾಕೆಯನ್ನು ಹಾರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ಬೃಹತ್ ಗೆಲುವಿನ ಕುರಿತು ಟ್ವಿಟರ್ ತುಂಬಾ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು ಹಲವಾರು ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾವನ್ನು ಹೊಗಳಿದ್ದಾರೆ.
ಸದ್ಯ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದು, ಮುಂದಿನ 2 ಟೆಸ್ಟ್ ಪಂದ್ಯಗಳ ಪೈಕಿ ಯಾವುದಾದರೊಂದು ಪಂದ್ಯವನ್ನು ಗೆದ್ದರೆ ಸಾಕು ಸರಣಿಯನ್ನು ಕೈವಶಪಡಿಸಿಕೊಳ್ಳಲಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆಲ್ಲುವ ಸಾಧನೆ ಮಾಡುವ ಹೊಸ್ತಿಲಲ್ಲಿದೆ. ಹೌದು, ಟೀಮ್ ಇಂಡಿಯಾ ಇದುವರೆಗೂ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಗಳನ್ನು ಆಡಿದೆ, ಆದರೆ ಒಂದೇ ಒಂದು ಬಾರಿಯೂ ಕೂಡ ಟೆಸ್ಟ್ ಸರಣಿಯನ್ನು ಗೆಲ್ಲಲು ಆಗಿರಲಿಲ್ಲ. ಆದರೆ ಈ ಬಾರಿ ಈಗಾಗಲೇ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾ ಈ ಸಾಧನೆ ಮಾಡುವ ಎಲ್ಲಾ ಲಕ್ಷಣಗಳು ಇವೆ.
ಈ ಕುರಿತಾಗಿಯೇ ಇದೀಗ ಪಂದ್ಯ ಮುಗಿದ ನಂತರ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಕೆಎಲ್ ರಾಹುಲ್ ಮಾತನಾಡಿದ್ದು ಮುಂಬರುವ ಎರಡೂ ಪಂದ್ಯಗಳನ್ನು ಗೆಲ್ಲುವುದರ ಮೂಲಕ ಸರಣಿ ಕೈ ವಶಪಡಿಸಿಕೊಳ್ಳಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಕಳೆದ 2 - 3 ವರ್ಷಗಳಿಂದ ಉತ್ತಮ ಕ್ರಿಕೆಟ್ ಆಡುತ್ತಿರುವ ನಮಗೆ ಇದೀಗ ಸೆಂಚೂರಿಯನ್ ಕ್ರೀಡಾಂಗಣದಲ್ಲಿಯೂ ಜಯ ಸಾಧಿಸಿರುವುದು ಉತ್ತೇಜನವನ್ನು ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಮುಂಬರಲಿರುವ ವಾಂಡರರ್ಸ್ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಜಯ ಸಾಧಿಸಲಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.