IND vs SA: 2ನೇ ಟಿ20 ಪಂದ್ಯಕ್ಕೆ ಟಿಕೆಟ್ ಮಾರಾಟ ಪ್ರಾರಂಭ; ಬಾರಾಬತಿ ಸ್ಟೇಡಿಯಂ ಹೊರಗೆ ಕಾಲ್ತುಳಿತ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ದಾಖಲೆ ರನ್ ಗುರಿ ಬೆನ್ನತ್ತಿ ಗೆಲುವು ಸಾಧಿಸಿತು. 211 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ ಬಳಿಕ ಭಾರತದ ಕಳಪೆ ಬೌಲಿಂಗ್‌ನಿಂದ ಸೋಲಬೇಕಾಯಿತು.
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ಮಿಲ್ಲರ್ ಹಾಗೂ ವಾನ್ ಡರ್ ಡುಸೆನ್ ಭಾರತದ ಬೌಲಿಂಗ್ ದಾಳಿಯನ್ನು ಅಕ್ಷರಶಃ ಪುಡಿಗಟ್ಟಿದರು. ಈ ಮೂಲಕ ಭಾರತ ತಂಡವನ್ನು 7 ವಿಕೆಟ್‌ಗಳ ಅಂತರದ ಸೋಲಿಸಿ ಐದಿ ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ.
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2ನೇ ಟಿ20 ಪಂದ್ಯ ಒಡಿಶಾದ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ಜೂನ್ 12ರಂದು (ಭಾನುವಾರ) ನಡೆಯಲಿದ್ದು, ಹೀಗಾಗಿ ಗುರುವಾರದಿಂದಲೇ ಟಿಕೆಟ್ ಮಾರಾಟ ಗುರುವಾರ ಆರಂಭವಾಗಿದೆ. ಟಿಕೆಟ್ ಮಾರಾಟ ಶುರುವಾದ ತಕ್ಷಣ ಕ್ರಿಕೆಟ್ ಅಭಿಮಾನಿಗಳ ಕೈಗೆ ಟಿಕೆಟ್ ಸಿಗುತ್ತಿದ್ದಂತಯೇ ಹುಚ್ಚೆದ್ದು ಕುಣಿದಾಡಿದರು. ಈ ವೇಳೆ ಬಾರಾಬತಿ ಸ್ಟೇಡಿಯಂ ಹೊರಗೆ ಕಾಲ್ತುಳಿತ ಉಂಟಾಯಿತು.

ಕ್ರೀಡಾಂಗಣದ ಹೊರಗೆ ಕಾಲ್ತುಳಿತ
ಎರಡನೇ ಟಿ20ಗೆ ಟಿಕೆಟ್ ಪಡೆಯಲು ಕ್ರಿಕೆಟ್ ಅಭಿಮಾನಿಗಳು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದರು. ಆಗ ಕೆಲವೇ ಸಮಯದಲ್ಲಿ ಪರಿಸ್ಥಿತಿ ಕೈ ಮೀರಿತು ಮತ್ತು ಕ್ರೀಡಾಂಗಣದ ಹೊರಗೆ ಕಾಲ್ತುಳಿತವನ್ನು ತಪ್ಪಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
12,000 ಟಿಕೆಟ್‌ಗಳ ಮಾರಾಟಕ್ಕಾಗಿ ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಕಟಕ್‌ನ ಬಾರಾಬತಿ ಕ್ರೀಡಾಂಗಣದ ಹೊರಗೆ ಕೌಂಟರ್‌ಗಳನ್ನು ಸ್ಥಾಪಿಸಿದೆ. ಮಹಿಳೆಯರಿಗಾಗಿ ಎರಡು ಪ್ರತ್ಯೇಕ ಸರತಿ ಸಾಲುಗಳಿದ್ದರೆ, ಉಳಿದ ಏಳು ಪುರುಷರಿಗಾಗಿ ಕೌಂಟರ್ ತೆರೆಯಲಾಗಿದೆ. ಮಹಿಳಾ ವಿಭಾಗದಲ್ಲಿ ತೀವ್ರ ವಾಗ್ವಾದ ನಡೆಯಿತು ಮತ್ತು ತ್ವರಿತವಾಗಿ ಗಲಾಟೆ ಆರಂಭವಾಯಿತು.

9 ಗಂಟೆಯ ನಂತರ ಬಂದು ಸರತಿ ಸಾಲಿನಲ್ಲಿ ಅಡ್ಡ ನುಸುಳಿದರು
2ನೇ ಟಿ20 ಪಂದ್ಯಕ್ಕೆ ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಸಬಿತಾ ಬೆಹೆರಾ ಅವರು, ""ಬೆಳಿಗ್ಗೆ 6 ಗಂಟೆಯಿಂದ ಆಧಾರ್ ಕಾರ್ಡ್ ಹಿಡಿದು ನಿಂತಿದ್ದೆ, ಆದರೆ ಕೆಲವರು 9 ಗಂಟೆಯ ನಂತರ ಬಂದು ಸರತಿ ಸಾಲಿನಲ್ಲಿ ಅಡ್ಡ ನುಸುಳಿದರು. ಇದರಿಂದ ಬೇಗ ಬಂದಿದ್ದ ನಮಗೆ ಟಿಕೆಟ್ ಸಿಗುವುದು ತಡವಾಯಿತು,'' ಎಂದು ಹೇಳಿದ್ದಾರೆ.
ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಅಜಯ್ ದಾಸ್ ಮಾತನಾಡಿ, "ಟಿಕೆಟ್ ಕೌಂಟರ್ ಬಳಿ ಭಾರಿ ಜನ ಜಮಾಯಿಸಿದ್ದರು ಮತ್ತು ಕೆಲವರು ಸರತಿ ಸಾಲುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿತು. ಹೀಗಾಗಿ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಸುವ್ಯವಸ್ಥೆ ತರಲು ಪ್ರಯತ್ನಿಸಿದರು. ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ," ಎಂದು ತಿಳಿಸಿದ್ದಾರೆ.

ಗುರುತಿನ ಪುರಾವೆಯನ್ನು ಒದಗಿಸಿದ ನಂತರ ಎರಡು ಟಿಕೆಟ್
ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಗುರುತಿನ ಪುರಾವೆಯನ್ನು ಒದಗಿಸಿದ ನಂತರ ಎರಡು ಟಿಕೆಟ್‌ಗಳನ್ನು ಮಾತ್ರ ಖರೀದಿಸಲು ಅನುಮತಿಸಲಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯಕ್ಕಾಗಿ ಒಟ್ಟು 5,000 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿದ್ದು, 8,000 ಟಿಕೆಟ್‌ಗಳನ್ನು ಕ್ಲಬ್‌ಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳಿಗೆ ಮಾರಾಟ ಮಾಡಲಾಗಿದೆ.
ಈ ಮಧ್ಯೆ, ಸುಮಾರು ನಾಲ್ಕು ವರ್ಷಗಳ ನಂತರ ಬಾರಾಬತಿ ಕ್ರೀಡಾಂಗಣವು ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಸಿದ್ಧವಾಗಿದೆ. 2019ರಲ್ಲಿ ಈ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಾಗಿತ್ತು. ಭಾರತವು ವೆಸ್ಟ್ ಇಂಡೀಸ್ ಅನ್ನು ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಎದುರಿಸಿತು. ನಾಯಕರಾಗಿದ್ದ ವಿರಾಟ್ ಕೊಹ್ಲಿ 85 ರನ್ ಗಳಿಸುವುದರೊಂದಿಗೆ ಭಾರತ ನಾಲ್ಕು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಜೂನ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಮೊದಲ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದರೆ, ಎರಡನೇ ಪಂದ್ಯ ಒಡಿಶಾದ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ನಾಲ್ಕನೇ ಪಂದ್ಯ ರಾಜ್‌ಕೋಟ್‌ನಲ್ಲಿ ಮತ್ತು ಐದನೇ ಪಂದ್ಯ ಜೂನ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications