
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೇ ಆರಂಭವಾಗಿದ್ದು ಇತ್ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ಈ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅವರ ನೆಲದಲ್ಲಿಯೇ ಸೋಲುಣಿಸಿರುವ ಟೀಮ್ ಇಂಡಿಯಾ ಪಂದ್ಯದಲ್ಲಿ 113 ರನ್‌ಗಳ ಬೃಹತ್ ಜಯವನ್ನು ಸಾಧಿಸಿದೆ. ಈ ಗೆಲುವಿನ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ಬರೆದಿರುವ ಟೀಮ್ ಇಂಡಿಯಾ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾಖಂಡದ ಚೊಚ್ಚಲ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ.
ಹೌದು, ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಇದುವರೆಗೂ ಏಷ್ಯಾದ ಯಾವುದೇ ತಂಡ ಕೂಡ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಲು ಆಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಮೂಲಕ ನೂತನ ದಾಖಲೆ ಬರೆದಿದೆ. ಈ ಮೂಲಕ ಟೆಸ್ಟ್ ಸರಣಿಯನ್ನು ಗೆಲ್ಲುವ ಭರವಸೆಯನ್ನು ಟೀಮ್ ಇಂಡಿಯಾ ಮೂಡಿಸಿದ್ದು ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಎಂಬ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುವ ಹಂತದಲ್ಲಿದೆ.
ಈಗಾಗಲೇ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾ ಉಳಿದ 2 ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯವನ್ನು ಗೆದ್ದರೂ ಸಾಕು ಸರಣಿಯನ್ನು ಕೈವಶ ಪಡಿಸಿಕೊಳ್ಳುವ ಮೂಲಕ ಮತ್ತೊಂದು ದಾಖಲೆ ಬರೆಯಲಿದೆ. ಸೆಂಚುರಿಯನ್‌ನಿಂದ ಜೋಹಾನ್ಸ್‌ಬರ್ಗ್ 41 ಕಿಲೋಮೀಟರ್ ದೂರವಿದ್ದು ಟೀಮ್ ಇಂಡಿಯಾ ಆಟಗಾರರು ಇಲ್ಲಿನ ವಾಂಡರರ್ಸ್ ಕ್ರೀಡಾಂಗಣ ತಲುಪಿದ್ದಾರೆ. ಇನ್ನು ಈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಇದುವರೆಗೂ ಒಂದು ಬಾರಿಯೂ ಕೂಡಾ ಸೋಲದೇ ಇರುವ ದಾಖಲೆಯನ್ನು ಹೊಂದಿದೆ. ಹೌದು, ವಾಂಡರರ್ಸ್ ಕ್ರೀಡಾಂಗಣದಲ್ಲಿ ಇದುವರೆಗೂ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಇನ್ನುಳಿದ 3 ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ. ಹೀಗೆ ವಾಂಡರರ್ಸ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಟೀಮ್ ಇಂಡಿಯಾ ಈ ಬಾರಿ ಕೂಡ ಉತ್ತಮ ತಂಡವನ್ನು ಹೊಂದಿದ್ದು ಜಯ ಸಾಧಿಸಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇನ್ನು ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ಮಾತನಾಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಕೆಎಲ್ ರಾಹುಲ್ ವಾಂಡರರ್ಸ್ ಪಂದ್ಯದಲ್ಲಿಯೂ ಕೂಡ ಜಯ ಸಾಧಿಸಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮುಂದಿನ ಪಂದ್ಯಗಳ ವೇಳಾಪಟ್ಟಿ:
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಹೀಗೆ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಅದರ ವೇಳಾಪಟ್ಟಿ ಹೀಗಿದೆ
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM