
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಟಿ ಟ್ವೆಂಟಿ ಮತ್ತು ಟೆಸ್ಟ್ ಸರಣಿಗಳಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸದ್ಯ ನ್ಯೂಜಿಲೆಂಡ್ ವಿರುದ್ಧ ಎರಡೂ ಸರಣಿಗಳಲ್ಲಿಯೂ ಜಯಗಳಿಸುವುದರ ಮೂಲಕ ವಿಜಯದ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧವೂ ಕೂಡ ಜಯ ಸಾಧಿಸುವುದರ ಮೂಲಕ ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯ ಜಯದ ಪತಾಕೆಯನ್ನು ನೆಡುವ ಉದ್ದೇಶವನ್ನು ಹೊಂದಿದೆ.
ಹೀಗೆ ಐತಿಹಾಸಿಕ ದಾಖಲೆ ನಿರ್ಮಿಸುವತ್ತ ಕಣ್ಣಿಟ್ಟಿರುವ ಟೀಮ್ ಇಂಡಿಯಾ ಡಿಸೆಂಬರ್ 16ರಂದು ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದು ಸದ್ಯ ಪ್ರಿಟೋರಿಯಾದ ಪಂಚತಾರಾ ಹೋಟೆಲ್ ಆದ ಐರೀನ್ ಕಂಟ್ರಿ ಲಾಡ್ಜ್ ಎಂಬಲ್ಲಿ ವಾಸ್ತವ್ಯವನ್ನು ಹೂಡಿದೆ. ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು, ಈ ಸಲುವಾಗಿ ಬಿಸಿಸಿಐ ಭಾರತದ 18 ಆಟಗಾರರ ಟೆಸ್ಟ್ ತಂಡವನ್ನು ಪ್ರಕಟಿಸಿತು. ಹೀಗೆ ಟೆಸ್ಟ್ ತಂಡವನ್ನು ಪ್ರಕಟಿಸಿದ ಬಿಸಿಸಿಐ ಅಜಿಂಕ್ಯ ರಹಾನೆ ಬದಲು ಈ ಬಾರಿ ರೋಹಿತ್ ಶರ್ಮಾ ಹೆಗಲಿಗೆ ಭಾರತ ಟೆಸ್ಟ್ ತಂಡದ ಉಪನಾಯಕನ ಜವಾಬ್ದಾರಿಯನ್ನು ಹಾಕಿತ್ತು. ಹೌದು, ಕಳೆದೆರಡು ವರ್ಷಗಳಿಂದ ಸತತವಾಗಿ ಆಟಗಾರನಾಗಿ ವಿಫಲವಾಗಿದ್ದ ಅಜಿಂಕ್ಯಾ ರಹಾನೆ ಈ ಸರಣಿಯ ಮೂಲಕ ತಮ್ಮ ಉಪನಾಯಕನ ಸ್ಥಾನವನ್ನು ಕಳೆದುಕೊಂಡರು.
ಅತ್ತ ಇತ್ತೀಚೆಗಷ್ಟೇ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ ನಂತರ ಭಾರತ ಏಕದಿನ ತಂಡದ ನಾಯಕನಾಗಿ ಕೂಡ ಆಯ್ಕೆಯಾದರು ಮತ್ತು ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನವನ್ನು ಸಹ ಪಡೆದುಕೊಂಡರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವುದಕ್ಕೂ ಮುನ್ನ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದ ರೋಹಿತ್ ಶರ್ಮಾ ಗಾಯಕ್ಕೊಳಗಾದ ಹಿನ್ನಲೆಯಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯುವ ಸಲುವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದರು. ಹೀಗಾಗಿ ರೋಹಿತ್ ಶರ್ಮಾ ಬದಲಾಗಿ ಪ್ರಿಯಾಂಕ್ ಪಾಂಚಾಲ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ರೋಹಿತ್ ಶರ್ಮಾ ಬದಲಾಗಿ ನೂತನ ಆಟಗಾರನನ್ನು ಟೀಮ್ ಇಂಡಿಯಾಗೆ ಆಯ್ಕೆಯನ್ನೇನೋ ಮಾಡಲಾಗಿತ್ತು ಆದರೆ ಇದರ ಬೆನ್ನಲ್ಲೇ ರೋಹಿತ್ ಶರ್ಮಾ ನಿಭಾಯಿಸಬೇಕಿದ್ದ ಭಾರತ ಟೆಸ್ಟ್ ತಂಡದ ಉಪನಾಯಕ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು.
ಆ ಪ್ರಶ್ನೆಗೆ ಇದೀಗ ಬಿಸಿಸಿಐ ಉತ್ತರವನ್ನು ನೀಡಿದ್ದು, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೆ ಎಲ್ ರಾಹುಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆಯನ್ನು ಮಾಡಿದೆ. ಸದ್ಯ ರೋಹಿತ್ ಶರ್ಮಾ ಫಿಟ್ ಆಗಿದ್ದೇನೆ ಎಂದು ಸಾಬೀತುಪಡಿಸಿಕೊಳ್ಳಲು ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಲಭ್ಯರಾಗ್ತಾರಾ ಅಥವಾ ಇಲ್ಲವಾ ಎಂಬುದು ಬಹಿರಂಗವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳ ವೇಳಾಪಟ್ಟಿ ಈ ಕೆಳಕಂಡಂತಿದೆ..
ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು ಇದರ ವೇಳಾ ಪಟ್ಟಿ ಈ ಕೆಳಕಂಡಂತಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಹೀಗೆ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಅದರ ವೇಳಾಪಟ್ಟಿ ಹೀಗಿದೆ
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM