
ಸದ್ಯ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊರೋನಾ ಸೋಂಕಿತರು ಮತ್ತು ಒಮೈಕ್ರಾನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು ದೇಶದಲ್ಲಿ ಬಿಗುವಿನ ವಾತಾವರಣವಿದೆ. ಹೀಗಿದ್ದರೂ ಸಹ ಈ ಹಿಂದೆ ನಿಗದಿಯಾಗಿದ್ದ ಟೆಸ್ಟ್ ಸರಣಿ ರದ್ದಾಗಬಾರದು ಎಂಬ ಉದ್ದೇಶದಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆಟಗಾರರು ಬಯೋ ಬಬಲ್ ವ್ಯವಸ್ಥೆಯೊಂದಿಗೆ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದ್ದಾರೆ.
ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ಆರಂಭವಾಗಿದ್ದು, 3 ಪಂದ್ಯಗಳ ಟೆಸ್ಟ್ ಸರಣಿ ಪೈಕಿಯ ಚೊಚ್ಚಲ ಪಂದ್ಯ ಬಾಕ್ಸಿಂಗ್ ಡೇನಿಂದ ಶುರುವಾಗಿದೆ. ಹೀಗೆ ಡಿಸೆಂಬರ್ 26ರಂದು ಶುರುವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ದಿನ ಯಾವುದೇ ಅಡ್ಡಿಗಳಿಲ್ಲದೇ ಸರಾಗವಾಗಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು. ಅದರಂತೆ ಮೊದಲನೇ ದಿನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಹಂತದಲ್ಲಿತ್ತು. ಆದರೆ ದ್ವಿತೀಯ ದಿನದಾಟ ಆರಂಭಕ್ಕೂ ಮುನ್ನ ವರುಣನ ಆಗಮನವಾದ್ದರಿಂದ ಎರಡನೇ ದಿನದಾಟ ಆರಂಭವಾಗದೇ ರದ್ದಾಯಿತು.
ಹೀಗೆ ಪಂದ್ಯದ ಎರಡನೇ ದಿನ ಸಂಪೂರ್ಣವಾಗಿ ಮಳೆಗೆ ಆಹುತಿಯಾದರೆ, ತೃತೀಯ ದಿನದಾಟ ಯಾವುದೇ ಅಡ್ಡಿಗಳಿಲ್ಲದೆ ಆರಂಭವಾಯಿತು. ಮೊದಲನೇ ದಿನ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದ್ದ ಟೀಮ್ ಇಂಡಿಯಾ ತೃತೀಯ ದಿನದಾಟ ಆರಂಭವಾಗುತ್ತಿದ್ದಂತೆ ತನ್ನ ಉಳಿದ 7 ವಿಕೆಟ್‍ಗಳನ್ನು ಸಾಲುಸಾಲಾಗಿ ಕಳೆದುಕೊಂಡಿತು. ಮೊದಲನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಹಂತದಲ್ಲಿದ್ದ ಟೀಮ್ ಇಂಡಿಯಾ ಮೂರನೇ ದಿನದಾಟ ಆರಂಭವಾದ ಬೆನ್ನಲ್ಲೇ ತನ್ನ ಉಳಿದ ವಿಕೆಟ್‍ಗಳನ್ನು ಸಾಲಾಗಿ ಕಳೆದುಕೊಂಡು 327 ರನ್‌ಗಳಿಗೆ ಆಲ್ ಔಟ್ ಆಗಿದೆ. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬೌಲರ್ ಲುಂಗಿ ಎನ್ ಗಿಡಿ 6 ವಿಕೆಟ್ ಪಡೆಯುವುದರ ಮೂಲಕ ಮಿಂಚಿದರು.
ಅತ್ತ ಮೊದಲನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ ಡೀನ್ ಎಲ್ಗರ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ದಕ್ಷಿಣ ಆಫ್ರಿಕಾದ ದಾಂಡಿಗರು ನೆಲಕಚ್ಚಿ ನಿಲ್ಲಲು ಎಷ್ಟೇ ಪ್ರಯತ್ನಿಸಿದರೂ ಭಾರತೀಯ ಬೌಲರ್‌ಗಳು ಅದಕ್ಕೆ ಯಾವುದೇ ಅವಕಾಶವನ್ನೂ ನೀಡಲಿಲ್ಲ. ದಕ್ಷಿಣ ಆಫ್ರಿಕಾದ ಟೆಂಬಾ ಬವುಮಾ 52 ಮತ್ತು ಕ್ವಿಂಟನ್ ಡಿ ಕಾಕ್ 34 ರನ್ ಗಳಿಸಿದ್ದು ಬಿಟ್ಟರೆ ತಂಡದ ಉಳಿದ ಯಾವುದೇ ಆಟಗಾರ ಕೂಡ 30 ರನ್ ಗಡಿದಾಟುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಲ್ಲಿಯೇ ಮೊದಲನೇ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲ್ ಔಟ್ ಆಯಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 5, ಶಾರ್ದೂಲ್ ಠಾಕೂರ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು. ಹೀಗೆ ಸೌತ್ ಆಫ್ರಿಕಾ ತಂಡವನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಕಟ್ಟಿಹಾಕಿದ ಟೀಮ್ ಇಂಡಿಯಾ 130 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು.
ಹಾಗೂ ಮೂರನೇ ದಿನದಲ್ಲಿಯೇ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಆಟಗಾರನಾದ ಮಯಾಂಕ್ ಅಗರ್ವಾಲ್ ( 4 ) ಅವರ ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಂತ್ಯಕ್ಕೆ ಕೆಎಲ್ ರಾಹುಲ್ ಅಜೇಯ 5 ರನ್ ಮತ್ತು ನೈಟ್ ವಾಚ್ ಮ್ಯಾನ್ ಆಗಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್ ಅಜೇಯ 4 ರನ್ ಕಲೆಹಾಕಿದ್ದರು. ಈ ಮೂಲಕ ಮೂರನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 1 ವಿಕೆಟ್ ನಷ್ಟಕ್ಕೆ 16 ರನ್ ಕಲೆಹಾಕಿತ್ತು. ಹಾಗೂ ಇದೀಗ ನಾಲ್ಕನೇ ದಿನದಾಟ ಆರಂಭವಾಗಿದ್ದು ಮಳೆ ಬರುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ತೃತೀಯ ದಿನದ ಲೈವ್ ಸ್ಕೋರ್ ಇಲ್ಲಿದೆ: