
ಸದ್ಯ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊರೋನಾ ಸೋಂಕಿತರು ಮತ್ತು ಒಮೈಕ್ರಾನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು ದೇಶದಲ್ಲಿ ಬಿಗುವಿನ ವಾತಾವರಣವಿದೆ. ಹೀಗಿದ್ದರೂ ಸಹ ಈ ಹಿಂದೆ ನಿಗದಿಯಾಗಿದ್ದ ಟೆಸ್ಟ್ ಸರಣಿ ರದ್ದಾಗಬಾರದು ಎಂಬ ಉದ್ದೇಶದಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆಟಗಾರರು ಬಯೋ ಬಬಲ್ ವ್ಯವಸ್ಥೆಯೊಂದಿಗೆ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದ್ದಾರೆ.
ಇನ್ನು ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಡಿಸೆಂಬರ್ 26ರ ಬಾಕ್ಸಿಂಗ್ ಡೇನಿಂದ ಶುರುವಾಗಿದೆ.
ಹೀಗೆ ಬಾಕ್ಸಿಂಗ್ ಡೇನಂದು ಸೆಂಚುರಿಯನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಮಯಾಂಕ್ ಅಗರ್ವಾಲ್ 60 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಚೇತೇಶ್ವರ್ ಪೂಜಾರಾ ಶೂನ್ಯ ಸುತ್ತಿದರು ಮತ್ತು ನಾಯಕ ವಿರಾಟ್ ಕೊಹ್ಲಿ 35 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಅತ್ತ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮೊದಲ ದಿನದಾಟದ ಪೂರ್ತಿ ಆಟವನ್ನಾಡಿ ಅಜೇಯ 122 ರನ್ ಕಲೆಹಾಕಿದ್ದಾರೆ ಹಾಗೂ ತೃತೀಯ ದಿನದಾಟದಂದು 150 ರನ್ ಗಡಿ ದಾಟುವ ನಿರೀಕ್ಷೆಗಳು ಕೂಡ ಇವೆ. ಅತ್ತ ಕಳೆದ ಹಲವು ತಿಂಗಳುಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಅಜಿಂಕ್ಯ ರಹಾನೆ ಕೂಡ ಮೊದಲನೇ ದಿನದಾಟದಂತ್ಯಕ್ಕೆ ಅಜೇಯ 40 ರನ್ ಕಲೆಹಾಕಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ಮೊದಲನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಹಂತದಲ್ಲಿತ್ತು ಹಾಗೂ ದ್ವಿತೀಯ ದಿನದಾಟದಂದು ಕಣಕ್ಕಿಳಿದು ಮತ್ತಷ್ಟು ರನ್ ಕಲೆಹಾಕುವ ಮೂಲಕ ಹರಿಣಗಳ ಮೇಲೆ ಹಿಡಿತವನ್ನು ಸಾಧಿಸುವ ಯೋಜನೆಯಲ್ಲಿತ್ತು. ಆದರೆ ಪಂದ್ಯದ ಎರಡನೇ ದಿನದಾಟ ಶುರುವಾಗುವ ಮುನ್ನವೇ ವರುಣನ ಆಗಮನವಾದ್ದರಿಂದ ಎರಡನೇ ದಿನದಾಟ ಆರಂಭಗೊಳ್ಳಲಿಲ್ಲ. ಹಾಗೂ ಮಳೆಯ ತೀವ್ರತೆ ಹೆಚ್ಚಾದ ಕಾರಣದಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟವನ್ನು ರದ್ದುಪಡಿಸಲಾಯಿತು.
ಹೀಗೆ ಪಂದ್ಯದ ದ್ವಿತೀಯ ದಿನದಾಟ ರದ್ದಾದ ನಂತರ ಕ್ರಿಕೆಟ್ ಪ್ರೇಕ್ಷಕರ ಚಿತ್ತ ಇದೀಗ ತೃತೀಯ ದಿನದಾಟದತ್ತ ನೆಟ್ಟಿದೆ. ಇನ್ನು ಅಕ್ಕ್ಯುವೆದರ್ ತಿಳಿಸಿರುವ ಪ್ರಕಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ತೃತೀಯ ದಿನದಾಟದಂದು ಯಾವುದೇ ಮಳೆಯ ಅಡ್ಡಿಯುಂಟಾಗುವುದಿಲ್ಲ ಎನ್ನಲಾಗುತ್ತಿದೆ. ಹೌದು, ಮೂರನೇ ದಿನದಾಟ ಯಾವುದೇ ಅಡೆತಡೆಗಳಿಲ್ಲದೆ ನಡೆಯಲಿದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಕೂಡ ಬ್ಯಾಟಿಂಗ್ ಮಾಡಲಿವೆ ಎಂಬ ಸುದ್ದಿ ಹೊರಬಿದ್ದಿದೆ. ಅದರಂತೆ ಈ ಪಂದ್ಯದ ಮೂರನೇ ದಿನದಾಟ ಸಮಯಕ್ಕೆ ಸರಿಯಾಗಿ ಆರಂಭವಾಗಿದ್ದು, ಪಂದ್ಯದ ಲೈವ್ ಸ್ಕೋರ್ ಈ ಕೆಳಕಂಡಂತಿದೆ..