
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಭಾರತದ ಯುವ ಬೌಲಿಂಗ್ ಪಡೆ ಒತ್ತಡದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದರು.
ತನ್ನ ವೇಗದ ಬೌಲಿಂಗ್ ಮೂಲಕವೇ ವಿಶ್ವದ ಗಮನ ಸೆಳೆದಿರುವ ಯುವ ವೇಗಿ ಉಮ್ರಾನ್ ಮಲಿಕ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಹತ್ವದ ದಾಖಲೆ ನಿರ್ಮಿಸಿದ್ದಾರೆ. 155 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಭಾರತದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಎಸೆತ ಬೌಲ್ ಮಾಡಿದ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.
ತಮ್ಮ ವೇಗದ ಎಸೆತದಲ್ಲಿ ಅವರು ವಿಕೆಟ್ ಪಡೆದದ್ದು ಕೂಡ ಮತ್ತೊಂದು ವಿಶೇಷ. ಶ್ರೀಲಂಕಾ ನಾಯಕ ದಸುನ್ ಶನಕ, 155 ಕಿಮೀ ಎಸೆತದ ಬಾಲ್ ಆಡಲು ಹೋಗಿ ಯುಜುವೇಂದ್ರ ಚಹಾಲ್‌ಗೆ ಕ್ಯಾಚ್ ನೀಡಿ ಔಟಾದರು.
ನಾಲ್ಕು ಓವರ್ ಬೌಲ್ ಮಾಡಿದ ಉಮ್ರಾನ್ ಮಲಿಕ್ ಕೇವಲ 27 ರನ್ ನೀಡಿದ್ದಲ್ಲದೆ, 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು. ಅದರಲ್ಲೂ ಈ ಮೊದಲು ಅವರ ಎಕಾನಮಿ ಬಗ್ಗೆ ಹೆಚ್ಚಿನ ಚರ್ಚೆಯಾಗಿತ್ತು, ಉಮ್ರಾನ್ ತಮ್ಮ ಬೌಲಿಂಗ್ ಕೌಶಲ್ಯವನ್ನು ಸುಧಾರಿಸಿಕೊಳ್ಳುವ ಮೂಲಕ ಈಗ ರನ್ ಬಿಟ್ಟುಕೊಡುವುದನ್ನು ನಿಯಂತ್ರಿಸಿದ್ದಾರೆ.

ಶೋಯೆಬ್ ಅಖ್ತರ್ ದಾಖಲೆ ಮುರಿಯುವ ವಿಶ್ವಾಸ
ಉಮ್ರಾನ್ ಮಲಿಕ್ ವೇಗದ ಬೌಲಿಂಗ್ ಬಗ್ಗೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತ ತಂಡದಲ್ಲಿ 150 ಕಿಮೀ ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಬುಮ್ರಾ ಒಬ್ಬರೇ ಇದ್ದರು, ಈಗ ಉಮ್ರಾನ್ ಮಲಿಕ್ ಆಗಮನದಿಂದ ವೇಗದ ಬೌಲಿಂಗ್ ವಿಭಾಗ ಇನ್ನಷ್ಟು ಶಕ್ತಿಯುತವಾಗಿದೆ.
ಉಮ್ರಾನ್ ಮಲಿಕ ವೇಗದ ಬೌಲರ್ ಶೋಯೆಬ್ ಅಖ್ತರ್ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯುವ ಗುರಿ ಹೊಂದಿದ್ದಾರೆ. ಶೋಯೆಬ್ ಅಖ್ತರ್ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿರುವುದು ಈವರೆಗಿನ ವಿಶ್ವದಾಖಲೆಯಾಗಿದೆ.
ಭಾರತದ ಪರವಾಗೊ ಚೊಚ್ಚಲ ಪಂದ್ಯವನ್ನಾಡಿದ ಮತ್ತೊಬ್ಬ ವೇಗಿ ಶಿವಂ ಮಾವಿ ಕೂಡ ಅದ್ಭುತ ಪ್ರದರ್ಶನ ನೀಡಿದರು. ಆಡಿದ ಮೊದಲ ಪಂದ್ಯದಲ್ಲೇ 4 ಓವರ್ ಗಳಲ್ಲಿ 22 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ಹರ್ಷಲ್ ಪಟೇಲ್ 2 ವಿಕೆಟ್ ಪಡೆದು ಮಿಂಚಿದರು.