
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗ ಸೂರ್ಯಕುಮಾರ್ ಯಾದವ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಅಮೋಘ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಬೃಹತ್ ಮೊತ್ತವನ್ನು ಗಳಿಸಿದ್ದು ನಿರ್ಣಾಯಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.
ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ 3ನೇ ಶತಕಗಳಿಸುವ ಮೂಲಕ 2023ರಲ್ಲಿಯೂ ತಮ್ಮ ಅದ್ಭುತ ಫಾರ್ಮ್ ಮುಂದುವರಿಸುವ ಸೂಚನೆ ನೀಡಿದ್ದಾರೆ. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಆರಂಭದಿಂದಲೇ ತಮ್ಮ ಎಂದಿನ ಶೈಲಿಯ ಆಕ್ರಮಣಕಾರಿ ಆಟಕ್ಕೆ ಮುಂದಾದರು. ರಾಜ್‌ಕೋಟ್ ಮೈದಾನದಲ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಸೂರ್ಯಕುಮಾರ್ ಕೇವಲ 45 ಎಸೆತದಲ್ಲಿ ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಚುಟುಕು ಮಾದರಿಯಲ್ಲಿ ತಮ್ಮ ಮೂರನೇ ಶತಕ ಪೂರ್ಣಗೊಳಿಸಿದರು.
ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಇಶಾನ್ ಕಿಶನ್ ವಿಕೆಟ್ ಶೀಘ್ರವಾಗಿ ಕಳೆದುಕೊಂತಾದರೂ ರಾಹುಲ್ ತ್ರಿಪಾಠಿ ಆಕ್ರಮಣಕಾರಿಯಾಗಿ ಆಡುವ ಮೂಲಕ ರನ್ ವೇಗಕ್ಕೆ ಚುಟುಕು ಮುಟ್ಟಿಸಿದರು. ಅಪಾಯಲಾರಿಯಾಗುವ ಸೂಚನೆ ನೀಡಿದ ತ್ರಿಪಾಠಿ 16 ಎಸೆತಗಳಲ್ಲಿ 35 ರನ್‌ಗಳಿಸಿದ ಬಳಿಕ ವಿಕೆಟ್ ಕಳೆದುಕೊಂಡರು. ಬಳಿಕ ಸೂರ್ಯಕುಮಾರ್ ಯಾದವ್ ಆಟ ಆರಂಭವಾಯಿತು.
ಈ ಪಂದ್ಯದಲ್ಲಿ ಒಟ್ಟು 51 ಎಸೆತ ಎದುರಿಸಿದ ಸೂರ್ಯಕುಮಾರ್ ಯಾದವ್ 7 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. 219ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಸೂರ್ಯ 112 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ಕೂಡ ಸ್ಪೋಟಕ ಆಟವಾಡುವ ಮೂಲಕ ತಂಡದ ಸ್ಕೋರ್ ಮತ್ತಷ್ಟು ಹೆಚ್ಚಲು ಕಾರಣವಾದರು. 9 ಎಸೆತ ಎದುರಿಸಿದ ಅಕ್ಷರ್ 21 ರನ್‌ಗಳಿಸಿ ಅಜೇಯವಾಗುಳಿದರು.
ಭಾರತ ಆಡುವ ಬಳಗ
ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಮುಖೇಶ್ ಕುಮಾರ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಅವಿಷ್ಕಾ ಫರ್ನಾಂಡೋ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ