ಕೊಲಂಬೊ, ಸೆಪ್ಟೆಂಬರ್ 03 : ಭಾರತ-ಶ್ರೀಲಂಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಸರಣಿಯನ್ನು 5-0ಯಿಂದ ಕೈವಶ ಮಾಡಿಕೊಂಡಿದೆ. ತವರಿನಲ್ಲಿಯೇ ಶ್ರೀಲಂಕಾ ತೀವ್ರ ಮುಖಭಂಗ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 239 ರನ್‌ಗಳ ಗುರಿ ನೀಡಿತ್ತು. ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ರೋಹಿತ್ ಶರ್ಮಾ 16, ಅಜಿಂಕ್ಯಾ ರೆಹಾನೆ 5ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ನಾಯಕ ವಿರಾಟ್ ಕೊಹ್ಲಿ 116 ಎಸೆತದಲ್ಲಿ 110 ರನ್ ಸಿಡಿಸಿದರು. ಮನೀಷ್ ಪಾಂಡೆ 36 ರನ್ ಗಳಿಸಿ ಔಟಾದರೆ, ಕೇದಾರ್ ಜಾಧವ್ 73 ಎಸೆತಗಳಲ್ಲಿ 63 ರನ್ ಗಳಿಸಿ ಕೊಹ್ಲಿಗೆ ಜೊತೆಯಾಗಿ ನಿಂತರು.
ಹಿಂದಿನ ಸುದ್ದಿ : ಭಾರತ-ಶ್ರೀಲಂಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿದೆ. ಐದು ಪಂದ್ಯಗಳ ಸರಣಿಯನ್ನು ಈಗಾಗಲೇ ವಿರಾಟ್ ಕೊಹ್ಲಿ ಪಡೆ 4-0ಯಿಂದ ಕೈವಶ ಮಾಡಿಕೊಂಡಿದೆ.
ಕೊಲಂಬೊದಲ್ಲಿ ಭಾನುವಾರ 5ನೇ, ಕೊನೆಯ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ಉಪುಲ್ ತರಂಗ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಸದ್ಯದ ಮಾಹಿತಿ ಪ್ರಕಾರ 22 ಓವರ್‌ಗಳಲ್ಲಿ ಶ್ರೀಲಂಕಾ 118 ರನ್ ಗಳಿಸಿದ್ದು, 3 ವಿಕೆಟ್ ಕಳೆದುಕೊಂಡಿದೆ.

ಭಾರತ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶಿಖರ್ ಧವನ್ ಇಂದು ಆಡುತ್ತಿಲ್ಲ. ಅಜಿಂಕ್ಯಾ ರೆಹಾನೆ, ಭುವನೇಶ್ವರ ಕುಮಾರ್, ಚಹಾಲ್ ಹಾಗೂ ಜಾಧವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರವಾಸಿ ಭಾರತದ ವಿರುದ್ಧದ 5 ಏಕದಿನ ಪಂದ್ಯಗಳಲ್ಲಿ 4ರಲ್ಲಿ ಶ್ರೀಲಂಕಾ ಸೋತಿದ್ದು, ತವರು ನೆಲದಲ್ಲಿಯೇ ನಿರಾಸೆ ಅನುಭವಿಸಿದೆ. ಸರಣಿಯನ್ನು ಸೋತ ಕಾರಣ ಮುಂಬರುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿದೆ.
ಭಾರತದ ವಿರುದ್ಧದ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳನ್ನಾದರೂ ಶ್ರೀಲಂಕಾ ಗೆಲ್ಲಬೇಕಿತ್ತು. ಸೆಪ್ಟೆಂಬರ್ 30ರ ವರೆಗಿನ ಶ್ರೇಯಾಂಕ ಪಟ್ಟಿಯಲ್ಲಿ 87 ಪಾಯಿಂಟ್ ಪಡೆದಿರುವ ಶ್ರೀಲಂಕಾ 8ನೇ ಸ್ಥಾನದಲ್ಲಿದೆ. 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲಿ ನಡೆಯಲಿದೆ.