
ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಇತ್ತಂಡಗಳ ನಡುವೆ ನಡೆದ 3 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಬಳಿದಿದೆ. ಹೀಗೆ ಟೀಮ್ ಇಂಡಿಯಾ ವಿರುದ್ಧ ಪ್ರವಾಸ ಕೈಗೊಂಡು ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿರುವ ಶ್ರೀಲಂಕಾ ಸದ್ಯ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಇನ್ನು ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮಾರ್ಚ್ 4ರಂದು ಆರಂಭಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರವೀಂದ್ರ ಜಡೇಜಾ ಅಬ್ಬರದ ಅಜೇಯ 175, ರಿಷಭ್ ಪಂತ್ 91 ಹಾಗೂ ರವಿಚಂದ್ರನ್ ಅಶ್ವಿನ್ 61 ರನ್ ಗಳಿಸುವ ಮೂಲಕ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿ ಎರಡನೇ ದಿನದಾಟದಂದು ಡಿಕ್ಲೇರ್ ಘೋಷಿಸಿತು. ಹೀಗೆ ಟೀಮ್ ಇಂಡಿಯಾ ವಿರುದ್ಧ ಮಂಕಾದ ಶ್ರೀಲಂಕಾ ಎರಡನೇ ದಿನದಾಟದಂದು ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿದೆ. ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ದಿಮುತ್ ಕರುಣರತ್ನೆ 28 ರನ್ ಗಳಿಸಿದರೆ, ಲಹಿರು ತಿರಿಮನ್ನೆ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನುಳಿದಂತೆ ಆ್ಯಂಜೆಲೊ ಮ್ಯಾಥ್ಯೂಸ್ 22 ಹಾಗೂ ಧನಂಜಯ ಡಿ ಸಿಲ್ವಾ 1 ರನ್ ಕಲೆಹಾಕಿದರೆ, ಎರಡನೇ ದಿನದಾಟದಂತ್ಯಕ್ಕೆ ಕಣದಲ್ಲಿ ಉಳಿದುಕೊಂಡಿರುವ ಪಾತುಮ್ ನಿಸ್ಸಾಂಕ ಅಜೇಯ 26 ರನ್ ಮತ್ತು ಚರಿತ ಅಸಲಂಕ ಅಜೇಯ 1 ರನ್ ಗಳಿಸಿದ್ದಾರೆ. ಈ ಮೂಲಕ ಶ್ರೀಲಂಕಾ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ ಹಾಗೂ 466 ರನ್‌ಗಳ ದೊಡ್ಡ ಮಟ್ಟದ ಹಿನ್ನಡೆಯನ್ನು ಅನುಭವಿಸಿದೆ.
ಇನ್ನು ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರೆ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬೂಮ್ರಾ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಹೀಗೆ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಮೂರನೇ ದಿನದಾಟದಂದು ( ಇಂದು ) ಪುಟಿದೇಳುತ್ತಾ ಅಥವಾ ಮತ್ತೆ ತನ್ನ ನೀರಸ ಪ್ರದರ್ಶನವನ್ನು ಮುಂದುವರಿಸಿ ಬೇಗನೇ ವಿಕೆಟ್ ಕಳೆದುಕೊಂಡು ಫಾಲೋ ಆನ್ ನಿಯಮಕ್ಕೆ ಒಳಗಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಆರಂಭವಾಗಿದ್ದು, ಲೈವ್ ಸ್ಕೋರ್ ಇಲ್ಲಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೋ, ಲಸಿತ್ ಎಂಬುಲ್ದೇನಿಯ, ಲಹಿರು ಕುಮಾರ