ರೋಹಿತ್ ನಿರ್ಧಾರಕ್ಕೆ ವೆಂಕಟೇಶ್ ಪ್ರಸಾದ್ ಕಿಡಿ: ತಂಡದ ಆಯ್ಕೆಯ ಮಾನದಂಡಗಳ ಬಗ್ಗೆಯೂ ವೆಂಕಿ ಗಂಭೀರ ಪ್ರಶ್ನೆ

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಏಕದಿನ ಸರಣಿ ಮಂಗಳವಾರದಿಂದ ಆರಂಭವಾಗಲಿದ್ದು ಎರಡು ತಂಡಗಳು ಕೂಡ ಈ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಏಕದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದು ಅಹರ್ನಿಶಿಯಾಗಿ(Day-night) ನಡೆಯಲಿದೆ. ಈ ಪಂದ್ಯಕ್ಕೂ ಮುನ್ನಾ ದಿನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ತಮ್ಮ ಜೊತೆಗೆ ಶುಬ್ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ.
ಟೀಮ್ ಇಂಡಿಯಾ ನಾಯಕನ ಈ ನಿರ್ಧಾರದ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿದ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರದ ಬಗ್ಗೆ ವೆಂಕಿ ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ಟೀಕಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆಟಗಾರರ ಆಯ್ಕೆಯ ಕ್ರಮದ ಬಗ್ಗೆಯೂ ಪ್ರಶ್ನೆಯೆತ್ತಿದ್ದಾರೆ.

ದ್ವಿಶತಕ ಸಿಡಿಸಿ ಅಬ್ಬರಿಸಿದ್ದ ಇಶಾನ್ ಕಿಶನ್
ಯುವ ಆಟಗಾರ ಇಶಾನ್ ಕಿಶನ್ ಇತ್ತೀಚೆಗಷ್ಟೇ ಅಂತ್ಯವಾದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಸಿದ್ದರು. ಸರಣಿಯ ಮೂರನೇ ಪಂದ್ಯದಲ್ಲಿ ಅಮೋಗ ಪ್ರದರ್ಶನ ನೀಡಿದ ಇಶಾನ್ ಕಿಶನ್ ಸ್ಪೋಟಕ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ಹೀಗಾಗಿ ಈ ಪಂದ್ಯದಲ್ಲಿ ಭಾರತ 400ಕ್ಕೂ ಅಧಿಕ ರನ್‌ಗಳಿಸಿದ್ದಲ್ಲದೆ ಭಾರೀ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಈ ಭರ್ಜರಿ ಆಟಗಾರ ಬಳಿಕ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಆರಂಭಿಕನಾಗಿ ಮುಂದುವರಿಯಲು ಇಶಾನ್ ಕಿಶನ್ ಸೂಕ್ತ ಆಟಗಾರ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇಶಾನ್ ಹೊರಗುಳಿಯುವುದನ್ನು ಖಚಿತಪಡಿಸಿದ ನಾಯಕ ರೋಹಿತ್
ರೋಹಿತ್ ಶರ್ಮಾ ಪಂದ್ಯಕ್ಕೂ ಮುನ್ನಾದಿನ ಮಾಧ್ಯಮಗಳ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರಂಬಿಕನಾಗಿ ಇಶಾನ್ ಕಿಶನ್ ಬದಲಿಗೆ ಶುಬ್ಮನ್ ಗಿಲ್ ತಮ್ಮ ಜೊತೆಗೆ ಕಣಕ್ಕಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. "ಇಬ್ಬರು ಆರಂಭಿಕರು(ಇಶಾನ್ ಹಾಗೂ ಗಿಲ್) ಕೂಡ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಆದರೆ ಅವರಿಬ್ಬರು ಹೇಗೆ ಬಂದಿದ್ದಾರೆ ಎಂದು ನೋಡಿದಾಗ ಶುಬ್ಮನ್ ಗಿಲ್‌ಗೆ ಅವಕಾಶ ನೀಡುವುದು ಹೆಚ್ಚು ನ್ಯಾಯ ಎನಿಸಿತು. ಯಾಕೆಂದರೆ ಆತ ಈ ಹಿಂದೆ ಆಡಿರುವ ಪಂದ್ಯಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಇನ್ನು ಇಶಾನ್ ಕಿಶನ್ ಕೂಡ ಉತ್ತಮವಾದ ಆಟಗಾರ. ಆತ ್ವಿಶತಕ ಗಳಿಸಿದ್ದಾರೆ. ದ್ವಿಶತಕ ಬಾರಿಸುವುದು ಶ್ರೇಷ್ಠ ಸಾಧನೆ ಎಂಬುದು ನನಗೆ ತಿಳಿದಿದೆ. ಆದರೆ ಈ ಹಿಂದೆ ಉತ್ತಮವಾಗಿ ಆಡಿರುವ ಆಟಗಾರನಿಗೆ ಸೂಕ್ತವೆನಿಸುವಷ್ಟು ಅವಕಾಶ ನೀಡುವುದು ನ್ಯಾಯ ಎಂಬುದು ನನ್ನ ಭಾವನೆ" ಎಂದು ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.
ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ವೆಂಕಟೇಶ್ ಪ್ರಸಾದ್ ಅಸಮಾಧಾನ
ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ವೆಂಕಟೇಶ್ ಪ್ರಸಾದ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತದ ಅಂತಿಮ ಏಕದಿನ ಪಂದ್ಯದಲ್ಲಿ ದ್ವುಶತಕ ಸಿಡಿಸಿದ ಆಟಗಾರನಿಗೆ ಅವಕಾಶ ನೀಡುವುದು ನ್ಯಾಯಯುತವಾಗಿರುತ್ತಿತ್ತು ಎಂಬುದು ನನ್ನ ಭಾವನೆ. ಆ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋತಿತ್ತು ಜೊತೆಗೆ ಸರಣಿ ಸೋಲು ಕೂಡ ಕಂಡಿತ್ತು. ಗಿಲ್‌ಗೆ ಸಾಕಷ್ಟು ಅವಕಾಶಗಳು ದೊರೆತಿದೆ. ಆದರೆ ದ್ವಿಶತಕ ಸಿಡಿಸಿದ ಆಟಗಾರನನ್ನು ಹೊರಗಿಡುವುದು ಸೂಕ್ತವಲ್ಲ" ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಆಯ್ಕೆಯ ಮಾನದಂಡದ ಬಗ್ಗೆ ವೆಂಕಿ ಪ್ರಶ್ನೆ
ಇನ್ನು ಇದೇ ಸಂದರ್ಭದಲ್ಲಿ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವುದು ಹಾಗೂ ತಂಡದಿಂದ ಕೈಬಿಡುವ ನಿರ್ಧಾರದ ಬಗ್ಗೆಯೂ ವೆಂಕಟೇಶ್ ಪ್ರಸಾದ್ ಮಾತನಾಡಿದ್ದಾರೆ. ತಂಡದ ಆಯ್ಕೆಯ ಮಾನದಂಡಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ "ನಾವು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುವುದಕ್ಕೆ ಕಾರಣವಿದೆ. ತಂಡದಲಿ ನಿರಂತರವಾಗಿ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಉತ್ತಮವಾಗಿ ಆಡುವ ಹಾಗೂ ವಿಶೇಷ ಸಾಮರ್ಥ್ಯವಿರುವ ಆಟಗಾರರನ್ನು ಕೈಬಿಡಲಾಗುತ್ತದೆ, ಸಾಧಾರಣ ಪ್ರದರ್ಶನ ನೀಡುವ ಆಟಗಾರರನ್ನು ಉಳಿಸಿಕೊಳ್ಳಲಾಗುತ್ತದೆ"ಎಂದು ಟ್ವೀಟ್ ಮಾಡಿದ್ದಾರೆ ವೆಂಕಟೇಶ್ ಪ್ರಸಾದ್.
ಮುಂದುವರಿದು ಅವರು "ಇಂಗ್ಲೆಂಡ್‌ನಲ್ಲಿ ಪಂತ್ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ಸರಣಿ ಗೆಲುವಿಗೆ ಕಾರಣವಾದರು. ಆದರೆ ಟಿ20 ಮಾದರಿಯಲ್ಲಿನ ಅವರ ಫಾರ್ಮ್ ದೃಷ್ಟಿಯಲ್ಲಿಟ್ಟುಕೊಂಡು ಏಕದಿನ ತಂಡದಿಂದಲೂ ಕೈಬಿಡಲಾಯಿತು. ಇನ್ನು ಕೆಎಲ್ ರಾಹುಲ್ ಒಂದೆರಡು ಇನ್ನಿಂಗ್ಸ್ ಹೊರತುಪಡಿಸಿದರೆ ಕಳಪೆ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೂ ಅವರು ಸ್ಥಾನ ಉಳಿಸಿಕೊಂಡಿದ್ದಾರೆ. ಆಯ್ಕೆಗೆ ಆಟಗಾರರ ಪ್ರದರ್ಶನ ಪ್ರಮುಖ ಮಾನದಂಡವಲ್ಲ ಎಂಬುದು ಬೇಸರದ ಸಂಗತಿ" ಎಂದು ಕಿಡಿ ಕಾರಿದ್ದಾರೆ ವೆಂಕಟೇಶ್ ಪ್ರಸಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications