
ಭಾರತ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ತಂಡ ಇಂದು ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸವಾಲೊಡ್ಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿರುವ ವಿಂಡೀಸ್ ಪಡೆ ಭಾರತಕ್ಕೆ ಸುಲಭ ತುತ್ತಾಗಿತ್ತು. ಇದೀಗ ಎರಡನೇ ಬಾರಿಗೆ ನಡೆಯುವ ಸೆಣೆಸಾಟದಲ್ಲಿ ಭಾರತವನ್ನು ಮಣಿಸಿ ಸರಣಿಯನ್ನು ಸಮಬಲಗೊಳಿಸಲೇಬೇಕೆಂಬ ಹಠ ತೊಟ್ಟಿದೆ ಪೊಲಾರ್ಡ್ ಬಳಗ. ಹೀಗಾಗಿ ಈ ಕದನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಎರಡನೇ ಪಂದ್ಯ ಕೂಡ ಅಹದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಸಾಧಿಸಿದ ಹಿಡಿತವನ್ನು ಎರಡನೇ ಪಂದ್ಯದಲ್ಲಿಯೂ ಮುಂದುವರಿಸುವ ಆತ್ಮವಿಸ್ವಾಸ ಭಾರತೀಯ ಬಳಗದಲ್ಲಿದೆ. ವಿಂಡೀಸ್ ಪಡೆದ ಸ್ಪೋಟಕ ದಾಂಡಿಗರನ್ನು ಬೇಗನೆ ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಬೌಲರ್‌ಗಳು ಇದ್ದರೆ ಭಾರತದ ಬ್ಯಾಟಿಂಗ್ ಪಡೆ ಎರಡನೇ ಪಂದ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಯಲು ಸಿದ್ಧವಾಗಿದೆ.
ಮೊದಲ ಪಂದ್ಯಕ್ಕೂ ಮುನ್ನ ಭಾರತೀಯ ಪಾಳಯದಲ್ಲಿ ಕೊರೊನಾವೈರಸ್ ಕಾಣಿಸಿಕೊಂಡ ಕಾರಣ ಶಿಖರ್ ಧವನ್, ಶ್ರೇಯಸ್ ಐಯ್ಯರ್ ಅವರಂತಾ ಆಟಗಾರರು ಆಡಲು ಲಭ್ಯವಾಗಿರಲಿಲ್ಲ. ಈ ಆಟಗಾರರು ಎರಡನೇ ಪಂದ್ಯಕ್ಕೂ ಲಭ್ಯವಿರುವುದಿಲ್ಲ. ಆದರೆ ಮೊದಲ ಪಂದ್ಯದಿಂದ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಮತ್ತು ತಂಡಕ್ಕೆ ಸೇರ್ಪಡೆಯಾಗಿರುವ ಮಯಾಂಕ್ ಅಗರ್ವಾಲ್ ಈಗಾಗಲೇ ತಂಡವನ್ನು ಕೂಡಿಕೊಂಡಿದ್ದು ಆಯ್ಕೆಗೆ ಲಭ್ಯವಿದ್ದಾರೆ. ಹೀಗಾಗಿ ತಂಡದ ಬಲ ಹೆಚ್ಚಾಗಿದೆ.
ಪ್ರಥಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ 176 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗೆ ವೆಸ್ಟ್ ಇಂಡೀಸ್ ತಂಡ ನೀಡಿದ 177 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 28 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ 6 ವಿಕೆಟ್‍ಗಳ ಭರ್ಜರಿ ಜಯವನ್ನು ದಾಖಲಿಸಿತು. ಹೀಗೆ ಇತ್ತಂಡಗಳ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ವೆಸ್ಟ್ ಇಂಡೀಸ್ ಸ್ಕ್ವಾಡ್: ಶಾಯ್ ಹೋಪ್ (ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್ (ನಾಯಕ), ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಎನ್‌ಕ್ರುಮಾ ಬೊನ್ನರ್, ಓಡಿಯನ್ ಸ್ಮಿತ್, ರೊಮಾರಿಯೊ ಶೆಫರ್ಡ್
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಶಾರುಖ್ ಖಾನ್, ರವಿ ಬಿಷ್ಣೋಯ್, ದೀಪಕ್ ಚಹಾರ್, ಅವೇಶ್ ಖಾನ್ , ಕುಲದೀಪ್ ಯಾದವ್, ಕೆಎಲ್ ರಾಹುಲ್