
ಪುಣೆ, ಅಕ್ಟೋಬರ್ 27: ಪುಣೆಯಲ್ಲಿ ಶನಿವಾರ (ಅಕ್ಟೋಬರ್ 27) ನಡೆದ ವೆಸ್ಟ್ ಇಂಡೀಸ್-ಭಾರತ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ 38ನೇ ಅಂತಾರಾಷ್ಟ್ರೀಯ ಶತಕವನ್ನು ಪೂರೈಸಿದ್ದಾರೆ. ಪಂದ್ಯದಲ್ಲಿ ಕೊಹ್ಲಿ 107 ರನ್ ಸೇರಿಸಿದರು.
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 8, ಶಿಖರ್ ಧವನ್ 35 ರನ್ ಪೇರಿಸಿ ವಿಕೆಟ್ ಒಪ್ಪಿಸಿದ್ದರಿಂದ ಭಾರತ ಒತ್ತಡಕ್ಕೀಡಾಯಿತು. ಆದರೆ ವಿರಾಟ್, ರನ್ ಹೆಚ್ಚಿಸುವಲ್ಲಿ ಏಕಾಂಗಿ ಹೋರಾಟ ನಡೆಸಿದರು. 119 ಎಸೆತಗಳನ್ನು ಎದುರಿಸಿದ ಕೊಹ್ಲಿ 107 ರನ್ ಗಳಿಸಿ ಮರ್ಲಾನ್ ಸ್ಯಾಮ್ಯುಯೆಲ್ಸ್ ಗೆ ವಿಕೆಟ್ ಒಪ್ಪಿದರು.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಶೈ ಹೋಪ್ 95, ಶಿಮ್ರಾನ್ ಹೆಟ್ಮೇಯರ್ (37), ಜೇಸನ್ ಹೋಲ್ಡರ್ 32, ಆ್ಯಶ್ಲೆ ನರ್ಸ್ 40 ರನ್ ಬೆಂಬಲದೊಂದಿಗೆ 50 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 283 ರನ್ ಪೇರಿಸಿತ್ತು. ಗುರಿ ಬೆನ್ನತ್ತಿದ 47.4 ಓವರ್ ಗೆ ಎಲ್ಲಾ ವಿಕೆಟ್ ಕಳೆದು 240 ರನ್ ಪೇರಸಿಸುವುದರೊಂದಿಗೆ 43 ರನ್ ನಿಂದ ವಿಂಡೀಸ್ ಎದುರು ಶರಣಾಯಿತು.
ಕೊಹ್ಲಿ ಈ ಶತಕದೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 10,183 ರನ್ ಸಾಧನೆ ಮೆರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 24 ಶತಕ ಸಾಧನೆ ಹೊಂದಿರುವ ಕೊಹ್ಲಿ 6331 ರನ್ ಗಳಿಸಿದ್ದಾರೆ. ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಸದ್ಯ ಐಸಿಸಿ ರ್ಯಾಂಕಿಂಗ್ ನಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.