
ನವದೆಹಲಿ, ಡಿಸೆಂಬರ್ 13: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಂಡದಿಂದ ಹೊರಗಿರುವ ಸಂಕಟದಲ್ಲಿರುವ ಟೀಮ್ ಇಂಡಿಯಾಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ವೇಗಿ ಭುನವೇಶ್ವರ್ ಕುಮಾರ್ ಕೂಡ ಹೊರ ಬಿದ್ದಿದ್ದಾರೆ.
ವಿಂಡೀಸ್ ಎದುರಿನ ಏಕದಿನ ಸರಣಿಗಾಗಿ ಗಾಯಾಳು ಧವನ್ ಬದಲಿಗೆ ಮಯಾಂಕ್ ಅಗರ್ವಾಲ್ ಅವರನ್ನು ತಂಡದಲ್ಲಿ ಹೆಸರಿಸಲ್ಪಟ್ಟಿದ್ದರೆ, ಮತ್ತೊಬ್ಬ ಗಾಯಾಳು ಭುವನೇಶ್ವರ್ ಬದಲಿಗೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
'ಭುವನೇಶ್ವರ್ ಕುಮಾರ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಶಾರ್ದೂಲ್ ಠಾಕೂರ್ ತಂಡ ಸೇರಿಕೊಳ್ಳಲಿದ್ದಾರೆ,' ಎಂದು ಹೆಸರು ತಿಳಿಸಲಿಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿರುವ ಶಾರ್ದೂಲ್, ಗುರುವಾರ (ಡಿ.12) ಬರೋಡಾ ವಿರುದ್ಧ ಪಂದ್ಯವನ್ನಾಡಿದ್ದರು. ಹಿಂದಿನ ಬಾಂಗ್ಲಾ ವಿರುದ್ಧದ ಟಿ20ಐ ಸರಣಿಗೂ ಠಾಕೂರ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅಂದ್ಹಾಗೆ, ವಿಂಡೀಸ್ vs ಭಾರತ ಏಕದಿನ ಸರಣಿ ಭಾನುವಾರ (ಡಿ.15) ಆರಂಭವಾಗಲಿದೆ.