ಭಾರತ ಸದ್ಯ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಡುತ್ತಿದೆ. ಈ ವೇಳೆ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿರುವ ಭಾರತ, ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ, ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ಇನ್ನೇನು ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದರೆ ಕನ್ನಡಿಗನ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಹಾಗಿದ್ದಾರೆ ಆ ಪ್ಲೇಯರ್ ಯಾರು? ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಅಕ್ಟೋಬರ್ 2 ರಿಂದ ಅಹಮದಾಬಾದ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಇನ್ನೇನು ಭಾರತ ತಂಡವನ್ನು ಪ್ರಕಟಿಸಬೇಕಿದೆ. ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆಯಬಹುದು ಎಂಬ ಚರ್ಚೆಗಳು ಆರಂಭವಾಗಿದೆ. ಆದರೆ ಈ ಒಬ್ಬ ಪ್ಲೇಯರ್‌ಗೆ ಮಾತ್ರ ತನ್ನ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆತನೇ ಎಂಟು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಿದ್ದ ಕರುಣ್ ನಾಯರ್.

ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕನ್ನಡಿಗ ಕರುಣ್ ನಾಯರ್‌ಗೆ ಇಂಗ್ಲೆಂಡ್ ಪ್ರವಾಸದಲ್ಲಿ ಆಡಲು ಅವಕಾಶ ನೀಡಲಾಯಿತು. ಅಲ್ಲದೆ ವಿವಿಧ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಿದರೂ ಸಹ ಕರುಣ್ ಬ್ಯಾಟ್‌ನಿಂದ ರನ್‌ಗಳು ಬಾರಲಿಲ್ಲ. ಇವರು ಇಂಗ್ಲೆಂಡ್ ನೆಲದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಕರುಣ್ ಆಡಿದ 4 ಪಂದ್ಯಗಳ 8 ಇನಿಂಗ್ಸ್‌ಗಳಲ್ಲಿ 25.62ರ ಸರಾಸರಿಯಲ್ಲಿ 205 ರನ್ ಕಲೆ ಹಾಕಿದದಾರೆ. ಇದರಲ್ಲಿ 1 ಅರ್ಧಶತಕ ಸೇರಿದೆ. ಹೀಗಾಗಿ ಆಯ್ಕೆ ಸಮಿತಿ ಇವರನ್ನು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಕೈ ಬಿಡುವ ಸಾಧ್ಯತೆ ಇದೆ.
ಕರುಣ್ ನಾಯರ್ ಫಾರ್ಮ್‌ಗಾಗಿ ಪರದಾಟ ನಡೆಸಿದರೆ, ಇತ್ತ ಇನ್ನೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಲಯವನ್ನು ಪ್ರದರ್ಶಿಸಿದ್ದಾರೆ. ಭಾರತ "ಎ" ಪರ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದ ದೇವದತ್ 150 ರನ್ ಬಾರಿಸಿ ಮಿಂಚಿದ್ದರು. ಇವರು ಕರ್ನಾಟಕದಲ್ಲಿ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಪಂದ್ಯದಲ್ಲೂ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದ್ದರು. ಒಂದು ವೇಳೆ ಆಯ್ಕೆ ಸಮಿತಿ ಕರುಣ್ ನಾಯರ್‌ಗೆ ಗೇಟ್ ಪಾಸ್ ನೀಡಿದ್ದೇ ಆದಲ್ಲಿ, ಇನ್ನೊಬ್ಬ ಕನ್ನಡಿಗ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಆಯ್ಕೆ ಸಮಿತಿ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ದೇವದತ್ ಪಡಿಕ್ಕಲ್ ಅವರ ಅಮೋಘ ಲಯಕ್ಕೆ ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಗುತ್ತದಾ ಎಂಬ ಚರ್ಚೆಗಳು ಆರಂಭವಾಗಿವೆ.