ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನೂತನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆವೃತ್ತಿಯನ್ನು ಟೀಮ್ ಇಂಡಿಯಾ ಈ ವಿದೇಶಿ ಸರಣಿಯ ಮೂಲಕ ಆರಂಭಿಸಲಿದ್ದು ಡೊಮೆನಿಕಾದಲ್ಲಿ ಜುಲೈ 12ರಂದು ಈ ಪಂದ್ಯ ಆರಂಭವಾಗಲಿದೆ. ಕಳೆದ ಒಂದು ದಶಕದಲ್ಲಿ ಕೆರಿಬಿಯನ್ ನಾಡಿನಲ್ಲಿ ಭಾರತದ ದಾಖಲೆಗಳನ್ನು ಗಲನಿಸಿದರೆ ಈ ಸರಣಿಯಲ್ಲಿ ಭಾರತ ಸರಣಿ ಗೆಲ್ಲುವ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಅತ್ಯಂತ ಅಪಾಯಕಾರಿಯಾಬಲ್ಲ ಆಟಗಾರ ಎಂದರೆ ಅದು ಆರ್ ಅಶ್ವಿನ್. ಆಲ್‌ರೌಂಡರ್ ಸಾಮರ್ಥ್ಯದ ಅಶ್ವಿನ್ ವಿಂಡಿಸ್ ವಿರುದ್ಧ ಕೂಡ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಇದೇ ಕಾರಣದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಈ ಅನುಭವಿ ಆಟಗಾರ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸುವ ನಿರೀಕ್ಷೆಯಿದೆ. ಈ ಮೂಲಕ ಭಾರತದ ಕ್ರಿಕೆಟಿಗರ ಪೈಕಿ ಈ ಮೈಲಿಗಲ್ಲು ದಾಟಿದ ಕೇವಲ ಮೂರನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ ಅಶ್ವಿನ್.

ಅಂದಹಾಗೆ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆಯುವ ಸನಿಹದಲ್ಲಿದ್ದು ಈ ವಿಶೇಷ ಸಾಧನೆಗಾಗಿ ಆರ್ ಅಶ್ವಿನ್ ಇನ್ನು ಕೇವಲ ಮೂರು ವಿಕೆಟ್‌ಗಳನ್ನು ಪಡೆಯಬೇಕಿದೆ. ವೆಸ್ಟ್ ಇಂಡಿಸ್ ವಿರುದ್ಧದಮೊದಲ ಟೆಸ್ಟ್ ಪಂದ್ಯದಲ್ಲಿಯೇ ಅನುಭವಿ ಆಟಗಾರ ಈ ಸಾಧನೆ ಮಾಡುವ ಸಾಧ್ಯತೆಯಿದೆ. ಆರ್ ಅಶ್ವಿನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಈವರೆಗೆ ಒಟ್ಟು 270 ಪಂದ್ಯಗಳನ್ನು ಆಡಿದ್ದು ಇದರಲ್ಲಿ 697 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇನ್ನು ಕೇವಲ ಮೂರು ವಿಕೆಟ್‌ಗಳನ್ನು ಪಡೆದುಕೊಂಡರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಭಾರತದ ಕೇವಲ ಮೂರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಭಾರತದ ಕ್ರಿಕೆಟ್‌ನ ದಿಗ್ಗಜ ಬೌಲರ್‌ಗಳಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಮಾತ್ರವೇ ಇದಕ್ಕೂ ಮುನ್ನ ಈ ಸಾಧನೆ ಮಾಡಿರುವ ಇಬ್ಬರು ಭಾರತೀಯ ಕ್ರಿಕೆಟರ್‌ಗಳು. ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 956 ವಿಕೆಟ್‌ಗಳನ್ನು ಪಡೆದುಕೊಂಡಿದ್ದರೆ ಹರ್ಭಜನ್ ಸಿಂಗ್ 711 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
ಇನ್ನು ಈ ಸರಣಿಯಲ್ಲಿ ಅಶ್ವಿನ್ ಹರಭಜನ್ ಸಿಂಗ್ ಅವರ ಅಂತಾರಾಷ್ಟ್ರೀಯ ವಿಕೆಟ್‌ಗಳ ಸಾಧನೆಯನ್ನು ಕೂಡ ಮುರಿಯಲಿದ್ದಾರಾ ಎಂಬ ಕುತೂಹಲ ಕೂಡ ಇದೆ. ಇದಕ್ಕಾಗಿ ಅಶ್ವಿನ್ 15 ವಿಕೆಟ್‌ಗಳನ್ನು ಪಡೆಯುವ ಅಗತ್ಯವಿದ್ಉ ಕೇವಲ ಎರಡು ಟೆಸ್ಟ್ ಪಂದ್ಯಗಳು ಮಾತ್ರ ಹೊಂದಿರುವ ಸರಣಿ ಇದಾಗಿರುವ ಕಾರಣ ಇದು ಕಠಿಣ. ಇನ್ನು ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತಿಹಾಸದಲ್ಲಿ 700 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಕೇವಲ 16ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ ಅಶ್ವಿನ್. ಇನ್ನು ಸ್ಪಿನ್ನರ್‌ಗಳ ಪೈಕಿ ಈ ಸಾಧನೆ ಮಾಡಿದ 6ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಇನ್ನು ಆರ್ ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ ಆಲ್‌ರೌಂಡರ್ ಆಗಿ ಅಮೋಘ ದಾಖಲೆ ಹೊಂದಿದ್ದಾರೆ ಎಂಬುದು ಗಮನಾರ್ಹ. ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ ನಾಲ್ಕು ಶತಕಗಳೊಂದಿಗೆ ಭರ್ಜರಿ 552 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ 21.85ರ ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ವೆಸ್ಟ್ ಇಂಡೀಸ್ ನೆಲದಲ್ಲಿಯೂ ಅಶ್ವಿನ್ 58.75ರ ಅದಸ್ಭುತ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದು ಎರಡು ಶತಕ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ 17 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 83/7 ಅವರ ಅತ್ಯುತ್ತಮ ಬೌಲಿಂಗ್ ದಾಖಲೆ. ಹೀಗಾಗಿ ಆರ್ ಅಶ್ವಿನ್ ಅವರನ್ನು ಕಂಡರೆ ವಿಂಡೀಸ್ ನಡುಗುವುದು ಖಂಡಿತಾ.