
ಇನಿಂಗ್ಸ್ ಆರಂಭಿಸಿದ ಕೊಹ್ಲಿ- ಧವನ್
ಪಂದ್ಯಕ್ಕೂ ಮೊದಲು, ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್, ಮೊದಲಿಗೆ ಭಾರತ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ಅಂತೆಯೇ, ವಿರಾಟ್ ಕೊಹ್ಲಿ, ಶಿಖರ್ ಧವನ್ ಇನಿಂಗ್ಸ್ ಆರಂಭಿಸಿದರು.

ಕೊಹ್ಲಿ-ಧವನ್ ರಿಂದ ಉತ್ತಮ ಆರಂಭ
ಕೊಹ್ಲಿ (39 ರನ್, 22 ಎಸೆತ, 7 ಬೌಂಡರಿ, 1 ಸಿಕ್ಸರ್) - ಧವನ್ (23 ರನ್, 12 ಎಸೆತ, 5 ಬೌಂಡರಿ) ಜೋಡಿ ಕೇವಲ 33 ಎಸೆತಗಳಲ್ಲಿ 64 ರನ್ ಚಚ್ಚಿ ಇನಿಂಗ್ಸ್ ಗೆ ಭದ್ರ ಬುನಾದಿ ಹಾಕಿದರು. 6ನೇ ಓವರ್ ನಲ್ಲಿ ಈ ಇಬ್ಬರ ವಿಕೆಟ್ ಉರುಳಿದ ನಂತರ, ಜತೆಯಾಗಿದ್ದು ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್.

ಕಾರ್ತಿಕ್ ಮಿಂಚಿನ ಆಟ
ರಿಷಬ್ ಪಂತ್ (38 ರನ್, 35 ಎಸೆತ, 2 ಬೌಂಡರಿ, 1 ಸಿಕ್ಸರ್) ಅವರು ಟಿ20ಗೆ ಬೇಕಾದ ಚುರುಕಿನ ಬ್ಯಾಟಿಂಗ್ ಆಡದೇ ಮಂದಗತಿಯ ಆಟಕ್ಕೆ ಮುಂದಾದರೆ, ಅತ್ತ ಕಾರ್ತಿಕ್ (48 ರನ್, 29 ಎಸೆತ, 5 ಬೌಂಡರಿ, 3 ಸಿಕ್ಸರ್) ಅಬ್ಬರದ ಆಟ ತೋರಿದರು. ಈ ಜೋಡಿ, 3ನೇ ವಿಕೆಟ್ ಗೆ 85 ರನ್ ಕಲೆಹಾಕಿದರೂ 16ನೇ ಓವರ್ ನಲ್ಲಿ ಕಾರ್ತಿಕ್ ವಿಕೆಟ್ ಉರುಳುವ ಮೂಲಕ ಬೇರ್ಪಟ್ಟಿತು.

ಧೋನಿ-ಜಾಧವ್ ವೈಫಲ್ಯ
ರಿಷಬ್ ಪಂತ್ ಗೆ ಜೋಡಿಯಾದ ಮಾಜಿ ನಾಯಕ ಧೋನಿ, ಕೇವಲ 2 ರನ್ (3 ಎಸೆತ) ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಆನಂತರ ಕೇದಾರ್ ಜಾಧವ್ (4 ರನ್, 4 ಎಸೆತ) ಕೂಡಾ ಹೆಚ್ಚು ನಿಲ್ಲಲಿಲ್ಲ. ಅವರಿಬ್ಬರ ನಿರ್ಗಮನದ ನಂತರ ಪಂತ್ ಕೂಡಾ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

190ರ ಗಡಿ ಮುಟ್ಟಿಸಿದ ರವೀಂದ್ರ- ಅಶ್ವಿನ್
ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ರವೀಂದ್ರ ಜಡೇಜಾ (ಅಜೇಯ 13 ರನ್, 8 ಎಸೆತ, 1 ಸಿಕ್ಸರ್), ರವಿಚಂದ್ರನ್ ಅಶ್ವಿನ್ (ಅಜೇಯ 11 ರನ್, 7 ಎಸೆತ, 1 ಬೌಂಡರಿ) ಗಳಿಸಿ ತಂಡದ ಮೊತ್ತವನ್ನು 190 ರನ್ ಗಳಿಗೆ ಮುಟ್ಟಿಸಿದರು.

ಗೇಲ್ ವೈಫಲ್ಯ ಮೆಟ್ಟಿ ನಿಂತಿ ಲೂಯಿಸ್
ಭಾರತದ ಇನಿಂಗ್ಸ್ ನಂತರ ಬ್ಯಾಟಿಂಗ್ ಗೆ ಇಳಿದ ವಿಂಡೀಸ್ ಪಡೆ, ಗೇಲ್ (18 ರನ್, 20 ಎಸೆತ, 1 ಬೌಂಡರಿ, 1 ಸಿಕ್ಸರ್) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ, ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಿದ ಲೂಯಿಸ್ (ಅಜೇಯ 125, 62 ಎಸೆತ, 6 ಬೌಂಡರಿ, 12 ಸಿಕ್ಸರ್) ಭಾರತೀಯ ಬೌಲರ್ ಗಳ ದಾಳಿಯನ್ನು ಧೂಳಿಪಟ ಮಾಡಿದರು.

ನಿಯಂತ್ರಣವನ್ನೇ ಮರೆತ ಭಾರತೀಯ ಬೌಲರ್ ಗಳು
ಭಾರತೀಯ ಬೌಲರ್ ಗಳಾದ ಭುವನೇಶ್ವರ್ ಕುಮಾರ್ (4 ಓವರ್, 27 ರನ್), ಅಶ್ವಿನ್ (4 ಓವರ್, 39 ರನ್), ಶಮಿ (3 ಓವರ್, 46 ರನ್), ಕುಲ್ದೀಪ್ ಯಾದವ್ (4 ಓವರ್ 34 ರನ್, 1 ವಿಕೆಟ್), ಜಡೇಜಾ (3.3 ಓವರ್, 41 ರನ್) ಇವರಲ್ಲಿ ಯಾರೂ ವಿಂಡೀಸ್ ರನ್ ಗತಿ ಮೇಲೆ ನಿಯಂತ್ರಣ ಹೇರಲೇ ಇಲ್ಲ. ಇದರ ಪರಿಣಾಮವಾಗಿ, ಭಾರತ ಸೋಲು ಕಾಣಬೇಕಾಯಿತು.

ಲೂಯಿಸ್ ಜತೆ ಇನಿಂಗ್ಸ್ ಕಟ್ಟಿದ ಸ್ಯಾಮ್ಯುಯೆಲ್ಸ್
ಲೂಯಿಸ್ ಗೆ ಬೆಂಬಲವಾಗಿ ನಿಂತು ಇನಿಂಗ್ಸ್ ಕಟ್ಟಿದ ಮಧ್ಯಮ ಕ್ರಮಾಂಕದ ಆಟಗಾರ ಮರ್ಲಾನ್ ಸ್ಯಾಮ್ಯುಯೆಲ್ಸ್ (36 ರನ್, 29 ಎಸೆತ, 5 ಬೌಂಡರಿ, 1 ವಿಕೆಟ್) ಅವರ ಆಟವೂ ಅನುಕರಣೀಯವಾಗಿತ್ತು. ಇದರ ಫಲದಿಂದಾಗಿ, ವೆಸ್ಟ್ ಇಂಡೀಸ್ ತಂಡ, ಭಾರತದ ವಿರುದ್ಧ ಭರ್ಜರಿ 9 ರನ್ ಗಳ ಜಯ ಕಂಡಿತು.

ಚುಟುಕು ಸ್ಕೋರ್ ವಿವರ
ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಗೆ 190 ರನ್ (ದಿನೇಶ್ ಕಾರ್ತಿಕ್ 48, ರಿಷಬ್ ಪಂತ್ 38; ಜೆರೊಮ್ ಟೇಲರ್ 31ಕ್ಕೆ 2, ಕೆಸ್ರಿಕ್ ವಿಲಿಯಮ್ಸ್ 42ಕ್ಕೆ 2); ವೆಸ್ಟ್ ಇಂಡೀಸ್ 18.3 ಓವರ್ ಗಳಲ್ಲಿ 1 ವಿಕೆಟ್ ಗೆ 194 (ಲೂಯಿಸ್ ಅಜೇಯ 125, ಸ್ಯಾಮ್ಯುಯೆಲ್ಸ್ ಅಜೇಯ 36; ಕುಲ್ದೀಪ್ ಯಾದವ್ 34ಕ್ಕೆ 1).
ಪಂದ್ಯ ಶ್ರೇಷ್ಠ: ಲೂಯಿಸ್ (ವೆಸ್ಟ್ ಇಂಡೀಸ್)


Click it and Unblock the Notifications