
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಭಾಗವಹಿಸಿ ಎರಡೂ ಸರಣಿಗಳಲ್ಲಿಯೂ ಕೂಡ ಹೀನಾಯವಾಗಿ ಸೋತು ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಯಾ ಇದೀಗ ತನ್ನ ಮುಂದಿನ ಸೆಣಸಾಟವನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಸಲಿದೆ. ಹೌದು, ಕೆರಿಬಿಯನ್ನರು ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳು ನಡೆಯಲಿವೆ. ಮೊದಲಿಗೆ ಫೆಬ್ರವರಿ 6ರಿಂದ ಇತ್ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾದರೆ, ಫೆಬ್ರವರಿ 16ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.
ಹೀಗೆ ಇತ್ತಂಡಗಳ ನಡುವೆ ಆಯೋಜನೆಯಾಗಿರುವ ಈ ಸರಣಿಗಳು ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಬೇಕಿತ್ತು. ಆದರೆ ದೇಶದಾದ್ಯಂತ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯ ಎಲ್ಲಾ ಪಂದ್ಯಗಳನ್ನು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ.
ಇನ್ನು ಕೊರೋನಾವೈರಸ್ ಹರಡುವಿಕೆಯ ನಂತರ ನಡೆದ ಕ್ರಿಕೆಟ್ ಟೂರ್ನಿಗಳಲ್ಲಿ ಬಹುತೇಕ ಟೂರ್ನಿಗಳು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆದವು. ಪ್ರೇಕ್ಷಕರಿಗೆ ಪಂದ್ಯಗಳನ್ನು ವೀಕ್ಷಿಸಲು ಮೈದಾನ ಪ್ರವೇಶಿಸುವ ಅವಕಾಶವನ್ನು ನೀಡಿದರೆ ಆಟಗಾರರ ಸುರಕ್ಷತೆಗಾಗಿ ಕಠಿಣ ಶ್ರಮವಹಿಸಿ ಮಾಡಿರುವ ಬಯೋ ಬಬಲ್ ವ್ಯವಸ್ಥೆಗೆ ಧಕ್ಕೆಯುಂಟಾಗಲಿದ್ದು ಕೊರೊನಾ ಹರಡುವ ಸಾಧ್ಯತೆಗಳು ಹೆಚ್ಚಿರಲಿದೆ. ಹೀಗಾಗಿಯೇ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿರುವ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳನ್ನು ಕೂಡ ಪ್ರೇಕ್ಷಕರಿಗೆ ಅವಕಾಶ ನೀಡದೆ ನಡೆಸಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಈ ವಿಷಯದ ಕುರಿತಾಗಿ ಹೊಸದೊಂದು ಸುದ್ದಿ ಹೊರಬಿದ್ದಿದ್ದು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿರುವ ಟಿ ಟ್ವೆಂಟಿ ಸರಣಿಯ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನದಲ್ಲಿ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ತಿಳಿಸಿದ್ದಾರೆ.
ಫೆಬ್ರವರಿ 16ರಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ವೀಕ್ಷಿಸಲು ಶೇ.75ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಪಶ್ಚಿಮ ಬಂಗಾಳ ಸರ್ಕಾರದಿಂದ ಅನುಮತಿ ದೊರೆತಿದೆ ಎಂಬ ವಿಷಯವನ್ನು ಕೂಡ ಅವಿಶೇಕ್ ದಾಲ್ಮೀಯಾ ಹಂಚಿಕೊಂಡಿದ್ದಾರೆ ಹಾಗೂ ಈ ಅವಕಾಶವನ್ನು ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದೇ ವೇಳೆ ಕೃತಜ್ಞತೆಯನ್ನು ಕೂಡ ಸಲ್ಲಿಸಿದ್ದಾರೆ.
ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ವೆಸ್ಟ್ ಇಂಡೀಸ್ ತಂಡ: ಕೀರಾನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೋಸೈನ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್ , ಹೇಡನ್ ವಾಲ್ಷ್ ಜೂ.
ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ: ರೋಹಿತ್ ಶರ್ಮಾ (ಸಿ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಇಶಾನ್ ಕಿಶನ್, ರಿಷಭ್ ಪಂತ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ , ಅವೇಶ್ ಖಾನ್, ಹರ್ಷಲ್ ಪಟೇಲ್.