ಪೃಥ್ವಿ ಶಾ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ: ನಾಯಕ ವಿರಾಟ್ ಕೊಹ್ಲಿ

ನವದೆಹಲಿ, ಅಕ್ಟೋಬರ್ 11: ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರನ್ನು ಕೊಂಚ ಕಾಲ ಅವರ ಪಾಡಿಗೆ ಬಿಟ್ಟು ಬಿಡಿ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ ವಿನಂತಿಸಿಕೊಂಡಿದ್ದಾರೆ. ಪೃಥ್ವಿಯನ್ನು ಕ್ರಿಕೆಟ್ ದಿಗ್ಗಜರಿಗೆ ಹೋಲಿಸುವುದಕ್ಕೆ ಸಂಬಂಧಿಸಿ ಕೊಹ್ಲಿ ಹೀಗಂದಿದ್ದಾರೆ.
ರಾಜ್ ಕೋಟ್ ನಲ್ಲಿ ನಡೆದಿದ್ದ ಭಾರತ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, 154 ಎಸೆತಗಳಿಗೆ 134 ರನ್ ಪೇರಿಸಿದ್ದರು. ಈ ವೇಳೆ ಪೃಥ್ವಿ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರಕ್ಕೆ ಒಳಗಾಗಿದ್ದರು.
ಪಾದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ್ದರಿಂದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅವರಂತ ದಿಗ್ಗಜರಿಗೆಲ್ಲ ಪೃಥ್ವಿ ಸಾಧನೆಯನ್ನು ಹೋಲಿಸಲಾಗಿತ್ತು. ಈ ಹೋಲಿಕೆ ಬಗ್ಗೆ ಕ್ರೀಡಾ ವಲಯದಲ್ಲಿ ಅಸಮಾಧಾನವೂ ವ್ಯಕ್ತವಾಗಿತ್ತು.

ಆತ ಇನ್ನಷ್ಟು ಬೆಳೆಯಲಿ
ಅಕ್ಟೋಬರ್ 12ರಂದು ಆರಂಭವಾಗಲಿರುವ ಭಾರತ vs ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಗೂ ಮುನ್ನ ದಿನ ಹೈದರಾಬಾದ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಯುವ ಆಟಗಾರನಿಗೆ ಕೊಂಚ ಬಿಡುವು ನೀಡಿ. ಆತನ ಸ್ವಂತ ಸಾಮರ್ಥ್ಯದ ಮೂಲಕ ಆತ ಇನ್ನಷ್ಟು ಬೆಳೆಯಲಿ ಎಂದು ವಿನಂತಿಸಿಕೊಂಡರು.

ಆತನ ಸಾಮರ್ಥ್ಯ ನೀವೆಲ್ಲರೂ ನೋಡಿದ್ದೀರಿ
ಸುದ್ದಿಗೋಷ್ಠಿಯಲ್ಲಿ ಮಾತು ಮುಂದುವರೆಸಿದ ಕೊಹ್ಲಿ, 'ಈಗಿನ್ನೂ 18ರ ಹರೆಯದ ಪೃಥ್ವಿ ಒಬ್ಬ ಅದ್ಭುತ ಪ್ರತಿಭಾವಂತ. ಆತನ ಶಕ್ತಿ, ಸಾಮರ್ಥ್ಯವನ್ನು ನೀವೆಲ್ಲರೂ ನೋಡಿದ್ದೀರಿ. ಹೀಗಾಗಿ ಯಾರಿಗೂ ಹೋಲಿಕೆ ಬೇಡ. ತನ್ನದೇ ರೀತಿಯಲ್ಲಿ ಆತ ಬೆಳೆದು ನಿಲ್ಲುವಂತಾಗಲಿ' ಎಂದರು.

ಆತ ಒತ್ತಡಕ್ಕೆ ಬೀಳಬೇಕಾಗುತ್ತದೆ
'ಮೊದಲ ಪಂದ್ಯಗಳಲ್ಲಿ ಆಡಿದಂತೆಯೇ ಮುಂದಿನ ಪಂದ್ಯಗಳಲ್ಲೂ ಆತ (ಪೃಥ್ವಿ) ಆಡುತ್ತಾನೆ ಎಂದು ನಮಗೆಲ್ಲರಿಗೂ ಖಂಡಿತಾ ಗೊತ್ತಿದೆ. ಆತ ನಿಜಕ್ಕೂ ಕಲಿಕೆಯಲ್ಲಿ ಹಂಬಲವುಳ್ಳವ, ಅಷ್ಟೇ ಚುರುಕಿನ ಹುಡುಗ. ಆತನನನ್ನು ನಾವು ಆತನ ಪಾಡಿಗೆ ಬಿಡದಿದ್ದರೆ, ಆತ ಒತ್ತಡಕ್ಕೆ ಬೀಳಬೇಕಾಗುತ್ತದೆ' ಎಂದು ವಿರಾಟ್ ಹೇಳಿದರು.

ಯಾರೊಂದಿಗೂ ಹೋಲಿಸಬೇಡಿ
ಗೌತಮ್ ಗಂಭೀರ್ ಅವರು ಬುಧವಾರ ಪೃಥ್ವಿಯನ್ನು ಶ್ರೇಷ್ಠ ಆಟಗಾರ ಸೆಹ್ವಾಗ್ ಗೆ ಹೋಲಿಸದಿರುವಂತೆ ಹೇಳಿದ ಮಾತನ್ನೇ ಕೊಹ್ಲಿ ಪುನರುಚ್ಚರಿಸಿದರು. 'ನಾವು ಆತನನ್ನು ಯಾರಿಗೂ ಹೋಲಿಸಲು ಹೋಗುವುದು ಬೇಡ. ಆತನನ್ನು ಸುಮ್ಮನೆ ಬಿಟ್ಟುಬಿಡೋಣ. ಯಾವುದೇ ಒತ್ತಡವಿಲ್ಲದೆ ಪೃಥ್ವಿ ಕ್ರೀಡಾಂಗಣದಲ್ಲಿ ಮತ್ತೆ ಮತ್ತೆ ಸಂಭ್ರಮಿಸುವಂತಾಗಲಿ' ಎಂದು ಕೊಹ್ಲಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications