ಗುಜರಾತ್‌ನ ವಡೋದರದ ಕೊಟಂಬಿ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ವಶಕ್ಕೆ ಪಡೆದಿದೆ. ಭಾರತ ತಂಡ ವೆಸ್ಟ್ ಇಂಡೀಸ್ ವನಿತೆಯರಿಗೆ 359 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಭಾರತದ ಬೌಲಿಂಗ್ ದಾಳಿಗೆ ನಡುಕಿತು. ಪರಿಣಾಮ ವಿಂಡೀಸ್ 243 ರನ್‌ಗಳಿಗೆ ಆಲೌಟಾಯಿತು. ವಿಂಡೀಸ್ ತಂಡವನ್ನು 115 ರನ್‌ಗಳ ಭಾರೀ ಅಂತರದಲ್ಲಿ ಭಾರತ ಸೋಲಿಸಿತು.
ಈ ಪಂದ್ಯದಲ್ಲಿ ಮೊದಲ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡ ಹರ್ಲೀನ್ ಡಿಯೋಲ್ ಶತಕ, ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ಅರ್ಧಶತಕದ ನೆರವನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಕಲೆ ಹಾಕಿತ್ತು. ಭಾರತ ನೀಡಿದ 359 ರನ್‌ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ವನಿತೆಯರು 243 ರನ್‌ಗಳಿಗೆ ಆಲೌಟಾದರು. ವೆಸ್ಟ್ ಇಂಡೀಸ್ ಪರ ಹೇಲಿ ಮ್ಯಾಥ್ಯೂಸ್ ಶತಕದ ಹೋರಾಟದ ನಡುವೆ ಕೂಡ ವಿಂಡೀಸ್ ಸರಣಿ ಕಳೆದುಕೊಂಡಿದೆ.

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಒಂದರ ಹಿಂದೆ ಒಂದರಂತೆ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡುತ್ತಿದ್ದಾರೆ. ಈ ಪಂದ್ಯದಲ್ಲೂ ಮಂಧಾನ 53 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರಿಗೆ ಬೆಂಬಲವಾಗಿ ಬಂದ ಪತ್ರಿಕಾ ರಾವಲ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಪತ್ರಿಕಾ ಕಳೆದ ಪಂದ್ಯದಲ್ಲಿಯೇ ಪದಾರ್ಪಣೆ ಮಾಡಿದ್ದರು. ನಂತರದ ಪಂದ್ಯದಲ್ಲಿಯೇ 76 ರನ್‌ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ಗಮನ ಸೆಳೆದರು.
ಮಂಧಾನ ವಿಕೆಟ್ ಬಳಿಕ ಕ್ರೀಸ್‌ಗೆ ಬಂದ ಹರ್ಲೀನ್ ಡಿಯೋಲ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿದರು. ಅವರು 103 ಎಸೆತಗಳಲ್ಲಿ 16 ಬೌಂಡರಿ ಬಾರಿಸುವ ಮೂಲಕ 115 ರನ್‌ಗಳ ಇನಿಂಗ್ಸ್‌ಗಳನ್ನು ಆಡಿದರು. ನಾಯಕಿ ಕೌರ್ ಕೇವಲ 22 ರನ್ ಗಳಿಸುವಷ್ಟರಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರೋಡ್ರಿಗಸ್ ಕೂಡ ಅದ್ಭುತ ಅರ್ಧಶತಕವನ್ನು ಸಿಡಿಸಿದರು. ಜಿಮಿಮಾ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು.
ಭಾರತ ನೀಡಿದ ಬೃಹತ್ ರನ್ ಚೇಸಿಂಗ್ ಮಾಡಲು ಶುರು ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಲಿಲ್ಲ. ಇದಕ್ಕೆ ಟೀಮ್ ಇಂಡಿಯಾ ಬೌಲರ್‌ಗಳು ಅವಕಾಶವನ್ನು ಮಾಡಿಕೊಡಲಿಲ್ಲ. ಪಂದ್ಯದುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ಟೀಮ್ ಇಂಡಿಯಾ ಬೌಲರ್‌ಗಳು ವೆಸ್ಟ್ ಇಂಡೀಸ್ ವನಿತೆಯರನ್ನು ಕಟ್ಟಿ ಹಾಕಿದರು. ಪ್ರಿಯಾ ಮಿಶ್ರಾ ಮೂರು ವಿಕೆಟ್ ಪಡೆದು ಮಿಂಚಿದರು. ದೀಪ್ತಿ ಶರ್ಮಾ, ಟಿಟಾಸ್ ಸಾಧು ಮತ್ತು ಪ್ರತೀಕಾ ರಾವಲ್ ತಲಾ ಎರಡು ವಿಕೆಟ್ ಪಡೆದರೆ, ರೇಣುಕಾ ಠಾಕೂರ್ ಸಿಂಗ್ ಒಂದು ವಿಕೆಟ್ ಕಬಳಿಸಿದರು.