

ಬೆಂಗಳೂರು, ಅಕ್ಟೋಬರ್ 19: ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಆಧುನಿಕ ರನ್ ಮಷಿನ್ ಎಂದು ಕರೆಯುವುದು ಅತಿಶಯೋಕ್ತಿಯೇನಲ್ಲ. ಕೊಹ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ.
ಕೊಹ್ಲಿ ಅವರು ಈಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಲು ಸಿದ್ಧರಾಗಿದ್ದಾರೆ. 9,779 ರನ್ ಗಳಿಸಿದ್ದು, ಇನ್ನು 221ರನ್ ಬಾರಿಸಿದರೆ, ಈ ಸಾಧನೆ ಮಾಡಿದ ಭಾರತದ ಐದನೇ ಹಾಗೂ ವಿಶ್ವದ 13ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
211 ಏಕದಿನ ಪಂದ್ಯಗಳಲ್ಲಿ 58.20ರ ಸರಾಸರಿಯಲ್ಲಿ 9,779 ರನ್ ಗಳಿಸಿರುವ ಕೊಹ್ಲಿ ಅವರು 10,000ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಸಾಲಿಗೆ ಸೇರಲಿದ್ದಾರೆ.
ಅಕ್ಟೋಬರ್ 21 ರಂದು ಗುವಾಹತಿಯಲ್ಲಿ ಆರಂಭವಾಗಲಿರುವ ವೆಸ್ಟ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ವೇಳೆ ಕೊಹ್ಲಿಗೆ ಈ ಸಾಧನೆ ಮಾಡಲು ಅಪೂರ್ವ ಅವಕಾಶವಿದೆ.
ಇದಲ್ಲದೆ, ಅತ್ಯಧಿಕ ಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಅವರು 35 ಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 49 ಶತಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
10,000ರನ್ ಕ್ಲಬ್ ನಲ್ಲಿರುವ ಆಟಗಾರರು:
ಸಚಿನ್ ತೆಂಡೂಲ್ಕರ್ : 18426ರನ್
ಕುಮಾರ್ ಸಂಗಕ್ಕಾರ : 14,234
ರಿಕಿ ಪಾಂಟಿಂಗ್ : 13,704
ಸನತ್ ಜಯಸೂರ್ಯ : 13,430
ಮಹೇಲ ಜಯವರ್ದನೆ : 12,650
ಇನ್ಜಾಮಾಮ್ ಉಲ್ ಹಕ್ : 11,739
ಜಾಕ್ ಕಾಲೀಸ್ : 11,579
ಸೌರವ್ ಗಂಗೂಲಿ : 11363
ರಾಹುಲ್ ದ್ರಾವಿಡ್ : 10889
ಬ್ರಿಯಾನ್ ಲಾರಾ : 10405
ತಿಲಕರತ್ನೆ ದಿಲ್ಶನ್ : 10290
ಮಹೇಂದ್ರ ಸಿಂಗ್ ಧೋನಿ : 10123