ಭಾವನಾತ್ಮಕ ಬರಹ ಹಂಚಿಕೊಂಡ ಉತ್ತಪ್ಪ
ಇನ್ನು ಈ ಟ್ವೀಟ್‌ನ ಜೊತೆಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದು ತಮ್ಮ ಕ್ರಿಕೆಟ್‌ನ ಹಾದಿಯ ಬಗ್ಗೆ ಏಳು ಬೀಳುಗಳ ಬಗ್ಗೆ ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ತನ್ನ ಕ್ರಿಕೆಟ್ ಜೀವನದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ.
"ವೃತ್ತಿಪರ ಕ್ರಿಕೆಟ್ ಆಡಲು ಆರಂಭಿಸಿ ಇಪ್ಪತ್ತು ವರ್ಷಗಳಾಗಿದೆ. ನನ್ನ ದೇಶ ಹಾಗೂ ನನ್ನ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಶ್ರೇಷ್ಠ ಗೌರವವಾಗಿದೆ. ಈ ಸುಂದರವಾದ ಪ್ರಯಣ ಬಹಳಷ್ಟು ಏಳು ಬೀಳುಗಳಿಂದ ಕೂಡಿದೆ. ಈ ಸಂದರ್ಭದಲ್ಲಿ ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಪುಟ್ಟ ಕುಟುಂಬದೊಂದಿಗೆ ಸಮಯ ಕಳೆಯಲು ನಾನು ಬಯಸಿದ್ದು ಜೀವನದ ಮತ್ತೊಂದು ಹಂತವನ್ನು ಎದುರುನೋಡುತ್ತಿದ್ದೇನೆ" ಎಂದು ಈ ಉತ್ತಪ್ಪ ಬರೆದುಕೊಂಡಿದ್ದಾರೆ.

46 ಏಕದಿನ ಪಂದ್ಯಗಳಲ್ಲಿ ಆಡಿರುವ ಉತ್ತಪ್ಪ
ರಾಬಿನ್ ಉತ್ತಪ್ಪ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ್ದರು. ಮೊದಲ ಪಂದ್ಯದಲ್ಲಿಯೇ ಭರ್ಜರಿ 86 ರನ್ ಸಿಡಿಸಿ ಮಿಂಚಿದ್ದರು ಉತ್ತಪ್ಪ. ಒಟ್ಟು 46 ಏಕದಿನ ಹಾಗೂ 13 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಪ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿಯೂ ಉತ್ತಪ್ಪ ಮಿಂಚು
ಕರ್ನಾಟಕ ಕಂಡ ಪ್ರತಿಭಾನ್ವಿತ ಆಟಗಾರರ ಪೈಕಿ ಒಬ್ಬರೆನಿಸಿರುವ ಉತ್ತಪ್ಪ 2002-03ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಮೂಲಕ ವೃತ್ತಿಪರ ಕ್ರಿಕೆಟ್ ಜೀವನವನ್ನು ಆರಂಭಿಸಿದ್ದರು. ದೇಸೀಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಸುದೀರ್ಘ ಕಾಲ ಪ್ರತಿನಿಧಿಸಿದ ಉತ್ತಪ್ಪ ನಂತರ ಸೌರಾಷ್ಟ್ರ ಹಾಗೂ ಕೇರಳ ತಂಡವನ್ನು ಕೂಡ ಪ್ರತಿನಿಧಿಸಿದ್ದಾರೆ. 142 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಉತ್ತಪ್ಪ 9446 ರನ್‌ಗಳನ್ನು ಗಳಿಸಿದ್ದಾರೆ. 22 ಶತಕ ಬಾರಿಸಿರುವ ಉತ್ತಪ್ಪ 41ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ದೇಶೀಯ ಏಕದಿನ ಮಾದರಿಯಲ್ಲಿ 203 ಪಂದ್ಯಗಳಲ್ಲಿ 6534 ರನ್‌ಗಳಿಸಿದ್ದು 16 ಶತಕಗಳಿಸಿದ್ದಾರೆ. ಇನ್ನು 290 ಟಿ20 ಪಂದ್ಯಗಳನ್ನು ಆಡಿರುವ ಉತ್ತಪ್ಪ 7272 ರನ್‌ಗಳನ್ನು ಗಳಿಸಿದ್ದು 133.08ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು ರಾಬಿನ್ ಉತ್ತಪ್ಪ.


Click it and Unblock the Notifications












